ಬದಿಯಡ್ಕ: ಭಜನೆ ಧ್ಯಾನ ಅಲ್ಲ. ಅದು ಒಂದು ಸಾಮೂಹಿಕ ಕ್ರಿಯೆ. ಭಜನೆಯಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ನಮ್ಮ ಹಿರಿಯರು ತೋರಿದ ದಾರಿಯಲ್ಲಿ ನಾವು ನಡೆದಾಗ ಸತ್ಪ್ರಜೆಯಾಗಲು ಸಾಧ್ಯ. ನಮ್ಮ ಆಕ್ರಂದನಗಳು ಭಗವಂತನ ಮನ ಮುಟ್ಟಲು ಭಜನೆಯೂ ಒಂದು ಮಾರ್ಗ. ಭಗವತ್ ಸಂಕೀರ್ತನೆಯು ಅಂತ:ಶಕ್ತಿಯನ್ನು ಪ್ರಚೋದಿಸುವ ಕೆಲಸ ಮಾಡುತ್ತದೆ. ವ್ಯಕ್ತಿಯಲ್ಲಿ ಶಕ್ತಿಯನ್ನು ತುಂಬುತ್ತದೆ. ಭಜನೆಯಿಂದ ಆನಂದ, ಸಾರ್ಥಕತೆ, ಶಾಂತಿ ಲಭಿಸುತ್ತದೆ ಎಂದು ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಎಡನೀರು ಚಾಪಾಡಿಯ ನೂತನ ಶ್ರೀ ಶಾರದಾ ಮೂಕಾಂಬಿಕಾ ಭಜನಾ ಮಂದಿರದಲ್ಲಿ ಶ್ರೀ ದೇವಿಯ ಛಾಯಾಚಿತ್ರ ಪ್ರತಿಷ್ಠಾ ಮಹೋತ್ಸವದಲ್ಲಿ ಶ್ರೀಗಳು ದೀಪ ಪ್ರಜ್ವಲನೆಗೈದು ಧಾರ್ಮಿಕ ಸಭೆÉಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಅಧ್ಯಕ್ಷತೆ ವಹಿಸಿದರು. ಕುಂಜರಕಾನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ನವೀನ ಭಟ್ ಕುಂಜರಕಾನ, ಶ್ರೀ ಎಡನೀರು ಮಠ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ಎಡನೀರು. ಎಡನೀರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸ್ಥಾಪಕ ಅಧ್ಯಕ್ಷ ಕೆ.ಮಾಧವ ಹೇರಳ, ಎಡನೀರು ಚಾಪಾಡಿ ವಯನಾಟ್ ಕುಲವನ್ ದೈವಸ್ಥಾನ ಕಾರ್ಯದರ್ಶಿ ಬಾಲಕೃಷ್ಣ ಕೆ.ವಿ.ಕಳೇರಿ, ನಿವೃತ್ತ ಅಧ್ಯಾಪಿಕೆ ಶಾಂತ ಕುಮಾರಿ ಟೀಚರ್ ಎಡನೀರು, ವೆಂಕಟ್ರಮಣ ಪೋತಿ ಮೊದಲಾದವರು ಅಭ್ಯಾಗತರಾಗಿ ಉಪಸ್ಥಿತರಿದ್ದರು. ಧಾರ್ಮಿಕ ಸಭೆಗೆ ಮುನ್ನ ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಅರುಣ ರಾಜೇಶ್ ಸ್ವಾಗತಿಸಿ, ಪ್ರಶಾಂತ್ ಕಲ್ಲುಗದ್ದೆ ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ ಕೆಮ್ಮಂಗಯ ವಂದಿಸಿದರು.