ನವದೆಹಲಿ (PTI): ವಿಜ್ಞಾನಿ ಚಾರ್ಲ್ಸ್ ಡಾರ್ವಿನ್‌ನ ವಿಕಾಸವಾದ ಸಿದ್ಧಾಂತ ಅಧ್ಯಾಯವನ್ನು 10ನೇ ತರಗತಿ ಪುಠ್ಯಪುಸ್ತಕದಿಂದ ತೆಗೆದುಹಾಕುವ ನಿರ್ಧಾರಕ್ಕೆ ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡೆಯಿಂದ, ಮಕ್ಕಳಲ್ಲಿ ಮೂಢನಂಬಿಕೆ ಹಾಗೂ ಅತಾರ್ಕಿಕ ಚಿಂತನೆಗಳು ಬೆಳೆಯುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.
ವಿಕಾಸವಾದ ಸಿದ್ಧಾಂತ ಭಾಗವನ್ನು 10ನೇ ತರಗತಿ ಪಠ್ಯಕ್ರಮದಿಂದ ಕೈಬಿಡುವ ನಿರ್ಧಾರವನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ) ಇತ್ತೀಚೆಗೆ ತೆಗೆದುಕೊಂಡಿತ್ತು. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು, ವಿಜ್ಞಾನ ಶಿಕ್ಷಕರು, ಬೋಧಕರು ಸೇರಿದಂತೆ 1800ಕ್ಕೂ ಹೆಚ್ಚು ಜನರು ಎನ್‌ಸಿಇಆರ್‌ಟಿ ನಿರ್ಧಾರವನ್ನು ವಿರೋಧಿಸಿದ್ದಾರೆ. ಬಹಿರಂಗ ಪತ್ರ ಬರೆದು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಡಾರ್ವಿನ್‌ನ ವಿಕಾಸವಾದವು ಪ್ರಮುಖವಾದ ಹಾಗೂ ಮೂಲ ಪರಿಕಲ್ಪನೆ ಎಂದು ಜೀವಶಾಸ್ತ್ರಜ್ಞರು ನಂಬುತ್ತಾರೆ. ಈ ಸಿದ್ಧಾಂತವಿಲ್ಲದೇ ನೈಸರ್ಗಿಕ ವಿಜ್ಞಾನದ ಯಾವ ಪರಿಕಲ್ಪನೆಗಳನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ತಜ್ಞರು ಹೇಳಿದ್ದು, ಸರ್ಕಾರದ ನಿರ್ಧಾರವನ್ನು ಹಾಸ್ಯಾಸ್ಪದ ಎಂದು ಕರೆದಿದ್ದಾರೆ.
'ವೈವಿಧ್ಯಮಯ ಸ್ವರೂಪದಲ್ಲಿರುವ ಜೀವಿಗಳ ಅಸ್ತಿತ್ವ, ಜೀವಿಗಳು ಹಾಗೂ ಅವುಗಳ ಸುತ್ತಲಿನ ವಾತಾವರಣ, ಪರಿಸರದ ಪರಸ್ಪರ ಕ್ರಿಯೆಗಳನ್ನು ವಿಕಾಸವಾದದ ಪರಿಕಲ್ಪನೆಯಿಲ್ಲದೇ ಅರ್ಥಮಾಡಿಸಲು ಆಗುವುದಿಲ್ಲ' ಎಂದು ಬೆಂಗಳೂರಿನ ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈನ್ಸ್ ರಿಸರ್ಚ್‌ನ ಪ್ರಾಧ್ಯಾಪಕ ಅಮಿತಾಭ್ ಜೋಷಿ ಅಭಿಪ್ರಾಯಪಟ್ಟಿದ್ದಾರೆ.
ಡಾರ್ವಿನ್‌ನ ಸಿದ್ಧಾಂತವು ಜೀವಶಾಸ್ತ್ರದ ಅಂತರ್ಗತ ಭಾಗವಾಗಿದ್ದು, ಮಾನವನ ದೇಹ ಹೇಗೆ ಕೆಲಸ ಮಾಡುತ್ತದೆ ಎಂದು ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ. ಉನ್ನತ ವ್ಯಾಸಂಗಕ್ಕೆ ಹೋಗುವ ಮುನ್ನ, ಶಾಲಾ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿಕಾಸವಾದವನ್ನು ಬೋಧಿಸಬೇಕಾದ ಅಗತ್ಯವಿದೆ ಎಂದು ಜೋಷಿ ಅವರು ಹೇಳಿದ್ದಾರೆ.
'ಜೀವ ವಿಕಾಸ ವಿಷಯವನ್ನು ಪಠ್ಯಕ್ರಮದಿಂದ ತೆಗೆದುಹಾಕುವುದರಿಂದ, ಜೀವಶಾಸ್ತ್ರವನ್ನು ಹೊರತುಪಡಿಸಿ ಬೇರೆ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಕಷ್ಟು ವಿದ್ಯಾರ್ಥಿಗಳು ವಿಕಾಸವಾದದ ಪರಿಕಲ್ಪನೆಯ ಅರಿವಿನಿಂದ ವಂಚಿತರಾಗುತ್ತಾರೆ. ಪ್ರೌಢಶಾಲೆ ಹಂತದಲ್ಲಿ ಈ ಪರಿಕಲ್ಪನೆಯನ್ನು ಕಲಿಸದೇ ಇರುವುದು ಸರಿಯಲ್ಲ' ಎಂದು ಹೇಳಿದ್ದಾರೆ.
ವಿಜ್ಞಾನದ ತಿಳಿವಳಿಕೆಯನ್ನು ಪಡೆಯಬೇಕಾದರೆ ಪಠ್ಯಕ್ರಮದಲ್ಲಿ ಡಾರ್ವಿನ್‌ನ ಪರಿಕಲ್ಪನೆಯನ್ನು ಸೇರಿಸಬೇಕಿರುವುದು ಅತಿಮುಖ್ಯ. ವೈಜ್ಞಾನಿಕ ಅರಿವು ಬೆಳೆಸಿಕೊಳ್ಳಬೇಕು ಎಂಬ ಆಶಯವು ಸಂವಿಧಾನದಲ್ಲೇ ಇದೆ ಎಂದು ತಜ್ಞರು ಹೇಳಿದ್ದಾರೆ.
2018ರಲ್ಲೂ ಇದೇ ರೀತಿಯ ವಿರೋಧ ವ್ಯಕ್ತವಾಗಿತ್ತು. ಅಂದಿನ ಕೇಂದ್ರ ಶಿಕ್ಷಣ ಸಚಿವ ಸತ್ಯಪಾಲ್ ಸಿಂಗ್ ಅವರು ವಿಕಾಸವಾದ ಅಧ್ಯಾಯವನ್ನು ಪಠ್ಯಕ್ರಮದಿಂದ ಕೈಬಿಡುವ ಪ್ರಸ್ತಾಪಕ್ಕೆ ಖಂಡನೆ ವ್ಯಕ್ತವಾಗಿತ್ತು.