ನವದೆಹಲಿ: ಜಾರಿ ನಿರ್ದೇಶನಾಲಯದ (ಇ.ಡಿ) ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಸೇವಾವಧಿಯನ್ನು ಮೂರನೇ ಬಾರಿಗೆ ವಿಸ್ತರಿಸಿರುವುದನ್ನು ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರವು, 'ಈ ವರ್ಷ ಹಣಕಾಸು ಕಾರ್ಯಪಡೆಯು (ಎಫ್‌ಎಟಿಎಫ್) ಉನ್ನತ ಮಟ್ಟದ ಪರಿಶೀಲನೆ ನಡೆಸುತ್ತಿರುವುದರಿಂದ ಸೇವಾವಧಿಯನ್ನು ವಿಸ್ತರಿಸಲಾಗಿದೆ. ನವೆಂಬರ್‌ನಲ್ಲಿ ಅವರು ನಿವೃತ್ತರಾಗಲಿದ್ದಾರೆ' ಎಂದು ಹೇಳಿದೆ.
ವಿಶ್ರಾ ಅವರ ಸೇವಾವಧಿ ವಿಸ್ತರಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ವಿಕ್ರಂ ನಾಥ್ ಮತ್ತು ಸಂಜಯ್ ಕರೋಲ್ ಅವರನ್ನೊಳಗೊಂಡ ನ್ಯಾಯಪೀಠವು ತೀರ್ಪನ್ನು ಕಾಯ್ದಿರಿಸಿದೆ.
ಲಿಖಿತ ಸಲ್ಲಿಕೆಗಳನ್ನು ಶುಕ್ರವಾರ ದಾಖಲಿಸುವಂತೆ ಅರ್ಜಿದಾರರಿಗೆ ನ್ಯಾಯಪೀಠವು ನಿರ್ದೇಶನ ನೀಡಿದೆ.
ಈ ಅಧಿಕಾರಿಯು ಯಾವುದೇ ರಾಜ್ಯದ ಡಿಜಿಪಿ ಅಲ್ಲ. ಆದರೆ ವಿಶ್ವಸಂಸ್ಥೆಯಂತಹ ಸಂಸ್ಥೆಯಲ್ಲಿ ದೇಶವನ್ನು ಪ್ರತಿನಿಧಿಸುವ ಅಧಿಕಾರಿಯಾಗಿದ್ದಾರೆ ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.