ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಬಹುನಿರೀಕ್ಷಿತ ಫಲಿತಾಂಶ ಅಂತಿಮ ಘಟ್ಟಕ್ಕೆ ಬಂದಿದ್ದು, ಕಾಂಗ್ರೆಸ್ ಸ್ಪಷ್ಟಬಹುಮತದತ್ತ ದಾಪುಗಾಲು ಇಟ್ಟಿದೆ. ಇದೀಗ ಮುಂದಿನ ಪ್ರಶ್ನೆ ಎದ್ದಿರುವುದು ರಾಜ್ಯದ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬುದು.
ಸಿದ್ದು ಸಿಎಂ, ಡಿಕೆಶಿ ಡಿಸಿಎಂ ಸೂತ್ರ ಈಗಾಗಲೇ ರೆಡಿಯಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ನಾಳೆ ದೆಹಲಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಮ್ಮುಖದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸಭೆ ನಡೆಸಲಿದ್ದು, ಸಿಎಂ ಸ್ಥಾನದ ಬಗ್ಗೆ ಚರ್ಚಿಸಿದ ಬಳಿಕ ಅಧಿಕೃತ ಘೋಷಣೆಯಾಗಲಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಏನೋ ಬಹುಮತ ಸಾಧಿಸಿದೆ. ಆದರೆ, ಪಕ್ಷದ ಒಳಗೆ ಸಿಎಂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ತೀವ್ರ ಪೈಪೋಟಿ ಇದೆ. ಈ ಸಿಎಂ ಸ್ಥಾನದ ಕಗ್ಗಂಟ್ಟನ್ನು ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿ ಬಗೆಹರಿಸಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಸಿಗಲಿದೆ.
ಹೈಕಮಾಂಡ್ ನಿರ್ಧರಿಸಲಿದೆ
ಮುಂದಿನ ಮುಖ್ಯಮಂತ್ರಿಯನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಹೈಕಮಾಂಡ್ ಎಂದರೆ ಕಲೆಕ್ಟಿವ್ ನಾಯಕತ್ವವಾಗಿದೆ. ಸೋನಿಯಾ, ರಾಹುಲ್ ಜತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ಚುನಾವಣಾ ಫಲಿತಾಂಶದ ಸದ್ಯದ ಟ್ರೆಂಡ್ ಪ್ರಕಾರ ಕಾಂಗ್ರೆಸ್ 133 ಸ್ಥಾನಗಳಲ್ಲಿ ಮುಂದಿದ್ದರೆ, ಬಿಜೆಪಿ 67 ಮತ್ತು ಜೆಡಿಎಸ್ 20 ಹಾಗೂ ಇತರೆ 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಸ್ಪಷ್ಟಬಹುಮತ ಸಾಧಿಸಿದ್ದು, ಸರ್ಕಾರ ರಚನೆ ಮಾಡುವುದು ಬಹುತೇಕ ಫಿಕ್ಸ್ ಆಗಿದೆ.
2018ರ ಫಲಿತಾಂಶ ಏನಿತ್ತು?
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತ ದೊರೆಯಲಿಲ್ಲ. ಉಳಿದಂತೆ ಕಾಂಗ್ರೆಸ್ 80 ಮತ್ತು ಜೆಡಿಎಸ್ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿತ್ತು. ಈ ಸರ್ಕಾರ ಕೇವಲ ಒಂದು ವರ್ಷ ಮಾತ್ರ ಪೂರೈಸಿತು. ಬದಲಾದ ರಾಜಕೀಯ ಚಿತ್ರಣದಲ್ಲಿ ಮೈತ್ರಿ ಸರ್ಕಾರದ 17 ಶಾಸಕರು ಬಿಜೆಪಿ ಜತೆ ಕೈಜೋಡಿಸಿದ್ದರಿಂದ ಬಿಜೆಪಿ ಸರ್ಕಾರ ರಚನೆ ಮಾಡಿತ್ತು.