ಕೊಚ್ಚಿ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‍ಐಆರ್ ರದ್ದುಗೊಳಿಸುವಂತೆ ಕೋರಿ ನಟ ಉಣ್ಣಿ ಮುಕುಂದನ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
2017 ರಲ್ಲಿ ಮಹಿಳಾ ಸ್ಕ್ರಿಪ್ಟ್ ಬರಹಗಾರ್ತಿ ನಮ್ರ ಅವರಿಗೆ ಕಿರುಕುಳ ನೀಡಲೆತ್ನಿಸಿದ ಪ್ರಕರಣದಲ್ಲಿ ಕೆಳ ನ್ಯಾಯಾಲಯದಲ್ಲಿ ನಟನ ವಿರುದ್ಧದ ವಿಚಾರಣೆಯನ್ನು ಮುಂದುವರಿಸಲು ನ್ಯಾಯಾಲಯವು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿದೆ.
ಪ್ರಕರಣದಿಂದ ತಮ್ಮನ್ನು ಖುಲಾಸೆಗೊಳಿಸುವಂತೆ ಉಣ್ಣಿ ಮುಕುಂದನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಬಾಬು ತಿರಸ್ಕರಿಸಿದ್ದಾರೆ.
ನ್ಯಾಯಾಲಯದ ಹೊರಗಿನ ಇತ್ಯರ್ಥಕ್ಕೆ ತಾನು ಒಪ್ಪಿದ್ದೇನೆ ಎಂಬ ಹೇಳಿಕೆಯನ್ನು ಮಹಿಳೆ ನಿರಾಕರಿಸಿದ ನಂತರ, ನಟನ ವಿರುದ್ಧದ ವಿಚಾರಣೆಯ ಪ್ರಕ್ರಿಯೆಗೆ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ಫೆಬ್ರವರಿಯಲ್ಲಿ ಹೈಕೋರ್ಟ್ ತೆರವು ಮಾಡಿತ್ತು.
ಸುಳ್ಳು ಅಫಿಡವಿಟ್ ಸಲ್ಲಿಸಿ ತಡೆಯಾಜ್ಞೆ ಪಡೆದಿದ್ದರೆ ಅದು ಅತ್ಯಂತ ಗಂಭೀರ ವಿಚಾರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾಯಾಲಯದ ಪ್ರಕರಣಗಳನ್ನು ಇತ್ಯರ್ಥಪಡಿಸಲು ಲಂಚ ಪಡೆದ ಆರೋಪದ ಮೇಲೆ ತನಿಖೆ ಎದುರಿಸುತ್ತಿರುವ ಸಾಯಿಬಿ ಜೋಸ್ ಕಿಡಂಗೂರ್ ಅವರು ಮುಕುಂದನ್ ಅವರನ್ನು ಪ್ರತಿನಿಧಿಸುತ್ತಿದ್ದಾರೆ.