ದಕ್ಷಿಣ ಭಾರತದ ಮನೆಗಳಲ್ಲಿ ಕನಿಷ್ಠ ಪಕ್ಷ ವಾರಕ್ಕೊಮ್ಮೆಯಾದರೂ ಮಾಡುವ ಬ್ರೇಕ್‌ಫಾಸ್ಟ್ ಅಂದರೆ ಅದು ಇಡ್ಲಿ. ಇನ್ನು ದಕ್ಷಿಣ ಭಾರತದ ಹೋಟೆಲ್‌ಗಳಲ್ಲಿ ಇಡ್ಲಿ ಇದ್ದೇ ಇರುತ್ತದೆ. ಇಡ್ಲಿಯಲ್ಲೂ ನೂರಾರು ವಿಧಗಳು. ತಿನ್ನುವ ಇಡ್ಲಿ ಯಾವುದೇ ಬಗೆಯದ್ದು ಅಂದ್ರೆ ರವೆ ಇಡ್ಲಿ, ತಟ್ಟೆ, ಮಲ್ಲಿಗೆ ಇಡ್ಲಿ ಹೀಗೆ ಯಾವುದೇ ಬಗೆಯದ್ದು ಇರಲಿ, ಇಡ್ಲಿ ಮೃದುವಾಗಿದ್ದರೆ ಮಾತ್ರ ಇಡ್ಲಿ ತುಂಬಾನೇ ರುಚಿ ಅನಿಸುವುದು.
ಇಡ್ಲಿ ರುಚಿಯಾಗಬೇಕೆಂದರೆ ಇಡ್ಲಿಗೆ ರುಬ್ಬಿದ ಹಿಟ್ಟು ಸರಿಯಾದ ರೀತಿಯಲ್ಲಿ ಹುದುಗು ಬಂದಿರಬೇಕು. ತುಂಬಾ ಹುದುಗು ಬಂದರೆ ಹುಳಿ ಅನಿಸುವುದು, ಕಡಿಮೆ ಹುದುಗು ಬಂದರೆ ಇಡ್ಲಿ ಗಟ್ಟಿಯಾಗಿ ತಿನ್ನಲು ಇಷ್ಟವಾಗಲ್ಲ. ಇಡ್ಲಿ ಮೃದುವಾಗಿರಬೇಕು, ಬಾಯಲ್ಲಿಟ್ಟರೆ ಅದರ ರುಚಿಯಲ್ಲಿ ಕಳೆದು ಹೋಗಬೇಕೆಂದರೆ ಇಡ್ಲಿ ಇಟ್ಟು ಮಾಡುವಾಗ ಈ ಟಿಪ್ಸ್ ಸಹಾಯಕ್ಕೆ ಬರುತ್ತೆ ನೋಡಿ:ಇಡ್ಲಿಗೆ ನೆನೆ ಹಾಕುವಾಗ
ಇಡ್ಲಿಗೆ ಅಕ್ಕಿ ಮತ್ತು ಉದ್ದಿನ ಬೇಳೆ 8 ಗಂಟೆ ನೆನೆಹಾಕಬೇಕು, ಎರಡೂ ಇಡ್ಲಿಗೆ ಬೇಕಾಗಿರುವ ಸಾಮಗ್ರಿ ಆದ ಕಾರಣ ಜೊತೆಯಲ್ಲೇ ನೆನೆ ಹಾಕಿದರೆ ಆಯ್ತು ಎಂದು ಜೊತೆಯಲ್ಲಿಯೇ ನೆನೆ ಹಾಕುತ್ತಿದ್ದರೆ ಈ ತಪ್ಪು ಮಾಡದಿರಿ. ಹೌದು ನೀವು ಉದ್ದಿನ ಬೇಳೆ ಹಾಗೂ ಅಕ್ಕಿಯನ್ನು ಪ್ರತ್ಯೇಕವಾಗಿ ನೆನೆ ಹಾಕಿ , ಉದ್ದಿನ ಬೇಳೆಯನ್ನು ನುಣ್ಣನೆ, ಅಕ್ಕಿಯನ್ನು ಸ್ವಲ್ಪ ತರಿಯಿರುವಂತೆ ರುಬ್ಬಿ ನಂತರ ಮಿಕ್ಸ್ ಮಾಡಬೇಕು. ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು ಜೊತೆಯಲ್ಲಿ ಹಾಕಿ ರುಬ್ಬಿದರೆ ಹುದುಗು ನೀವು ಬಯಸಿದಷ್ಟು ಪರ್ಫೆಕ್ಟ್ ಆಗಿ ಬರುವುದಿಲ್ಲ, ಬದಲಿಗೆ ಬೇರೆ-ಬೇರೆ ನೆನೆಹಾಕಿ ರುಬ್ಬಿ ನೋಡಿ ಅರೆ ಇಡ್ಲಿ ರುಚಿ ಸೂಪರ್ ಆಗಿದೆಯೆಲ್ಲಾ ಎಂದನಿಸದೆ ಇರಲ್ಲ.
ನೀವು 3 ಲೋಟ ಅಕ್ಕಿ ಹಾಕಿದರೆ 1 ಲೋಟ ಉದ್ದಿನ ಬೇಳೆ ಹಾಕಿ. ಉದ್ದಿನ ಬೇಳೆಯಲ್ಲಿ ಒಡೆದ ಅಥವಾ ಸಂಪೂರ್ಣ ಉದ್ದಿನ ಬೇಳೆಯನ್ನು ಬಳಸಬಹುದು.
* ನೀವು ಹುದುಗು ಬರಿಸಲು ಸೋಡಾ ಸೇರಿಸಬೇಕಾಗಿಲ್ಲ, ಒಂದು ಮುಷ್ಠಿಯಷ್ಟು ಅವಲಕ್ಕಿ ಸೇರಿಸಿದರೆ ಸಾಕು. ರುಬ್ಬು 10 ನಿಮಿಷ ಅವಲಕ್ಕಿಯನ್ನು ಒಂದು ಚಿಕ್ಕ ಬೌಲ್‌ನಲ್ಲಿ ನೆನೆ ಹಾಕಿದರೆ ಸಾಕು.
ಬೇಸಿಗೆಯಲ್ಲಿ ಇಡ್ಲಿಗೆ ಹಿಟ್ಟು ತಯಾರಿಸುವಾಗ
ನೀವು ಬೇಸಿಗೆಯಲ್ಲಿ ಇಡ್ಲಿಗೆ ರುಬ್ಬಿ ಇಟ್ಟಾಗ ಒಲೆ ಪಕ್ಕ ಅಥವಾ ಅಲ್ಯಮಿನಿಯಂ ಪಾತ್ರೆಯಲ್ಲಿ ಹಾಕಿಡುವ ಬದಲಿಗೆ ಸ್ಟೀಲ್ ಪಾತ್ರೆಯಲ್ಲಿ ಇಡಿ. ಅಲ್ಲದೆ ಹುದುಗು ಬರಲು ತುಂಬಾ ಹೊತ್ತು ಬೇಕಾಗಿಲ್ಲ. 8 ಗಂಟೆಗಿಂತ ಅಧಿಕ ಹೊತ್ತು ಹಿಟ್ಟು ರೂಮ್‌ನ ಉಷ್ಣತೆಗೆ ಇದ್ದರೆ ಹುಳಿ ಬರುವುದು. ಆದ್ದರಿಂದ ಬಳಸಿ ಹಿಟ್ಟು ಮಿಕ್ಕಿದ್ದರೆ ಫ್ರಿಡ್ಜ್‌ನಲ್ಲಿ ಇಡಬಹುದು.
ಚಳಿಗಾಲ ಅಥವಾ ಮಳೆಗಾಲ
ಚಳಿಗಾಲ ಅತವಾ ಮಳೆಗಾಲದಲ್ಲಿ ಇಡ್ಲಿಗೆ ರುಬ್ಬಿ ಇಟ್ಟರೆ ಹುದುಗು ಬರುವುದೇ ಇರಲ್ಲ, ಇಂಥ ಹಿಟ್ಟಿನಿಂದ ಇಡ್ಲಿ ತಯಾರಿಸಿದರೆ ಇಡ್ಲಿ ತುಂಬಾ ಗಟ್ಟಿಯಾಗಿರುತ್ತದೆ. ಚಳಿಗಾಲ, ಮಳೆಗಾಲದಲ್ಲಿ ಹಿಟ್ಟನ್ನು ರುಬ್ಬಿದ ಮೇಲೆ ಒಂದು ನಿಮಿಷ ಸ್ಟೌವ್ ಮೇಲೆ ಹಿಟ್ಟು ಸೌಟ್‌ನಿಂದ ನಿರಂತರ ತಿರುಗಿಸುತ್ತಾ ಬಿಸಿ ಮಾಡಿ, ನಂತರ ಇಟ್ಟರೆ ಚೆನ್ನಾಗಿ ಹುದುಗು ಬರುವುದು.
ಆದರೆ ಹೀಗೆ ತಯಾರಿಸುವಾಗ ತುಂಬಾ ಎಚ್ಚರವಹಿಸಬೇಕು, ಇಲ್ಲದಿದ್ದರೆ ಬಿಸಿಗೆ ಹಿಟ್ಟು ಗಟ್ಟಿಯಾಗುವುದು. ನಿಮಗೆ ಹಿಟ್ಟನ್ನು ಬಿಸಿ ಮಾಡಲು ಅಂದಾಜು ಗೊತ್ತಾಗದಿದ್ದರೆ ನೀವು ಹಿಟ್ಟನ್ನು ಗಟ್ಟಿಯಾಗಿ ರುಬ್ಬಿ, ಸ್ವಲ್ಪ ಕುದಿಯುವ ನೀರು ಮಿಕ್ಸ್ ಮಾಡಿ, ಇಡ್ಲಿ ಹದಕ್ಕೆ ಕಲೆಸಿ ಇಟ್ಟರೂ ಇಡ್ಲಿ ಚೆನ್ನಾಗಿ ಹುದುಗು ಬರುವುದು.