ಕಾಸರಗೋಡು: ಬೇಗೆಯಲ್ಲಿ ನೀರಿನ ಮೂಲಗಳು ಬತ್ತಿದರೆ ಸ್ಥಳೀಯಾಡಳಿತ ಸಂಸ್ಥೆಗಳು ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರು ಒದಗಿಸಲು ಬದಲಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಸೂಚಿಸಲಾಯಿತು.
ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ಹಳೇ ಕಿಯೋಸ್ಕ್‍ಗಳನ್ನು ಸ್ವಚ್ಛಗೊಳಿಸಿ ನೀರು ತುಂಬಿಸಿ ವಿತರಿಸಲು ಕ್ರಮ ಕೈಗೊಳ್ಳಬೇಕು. ಈ ಮೂಲಕ ಕುಡಿಯುವ ನೀರಿನ ಬವಣೆ ನೀಗಿಸಲು ಅಭಿವೃದ್ಧಿ ಸಮಿತಿ ಸಭೆ ಒತ್ತಾಯಿಸಿದೆ. ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು ತುರ್ತು ಕ್ರಮಕೈಗೊಳ್ಳಬೇಕು.
ನೀರು ವಿತರಣೆ ಬಗ್ಗೆ ಈ ಹಿಂದೆ ನೀಡಿದ ಸಲಹೆಗಳ ಪ್ರಗತಿ ಪರಿಶೀಲನೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೇ 5ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಲಿದೆ. ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ವ್ಯಾಪಕ ಜಲಸಂರಕ್ಷಣಾ ಅಭಿಯಾನ ನಡೆಸಲು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ ರಣವೀರಚಂದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಎ.ಕೆ.ಎಂ.ಅಶ್ರಫ್, ಎನ್.ಎ.ನೆಲ್ಲಿಕುನ್, ವಕೀಲ ಸಿ.ಎಚ್.ಕುಞಂಬು, ಇ.ಚಂದ್ರಶೇಖರನ್, ಎಂ.ರಾಜಗೋಪಾಲನ್, ಗ್ರಾಮ ಪಂಚಾಯಿತಿ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ.ವತ್ಸಲನ್, ಯೋಜನಾಧಿಕಾರಿ ಎ.ಎಸ್. ಮಾಯಾ, ಜಿಲ್ಲೆಯ ವಿವಿಧ ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು. ಜಿಲ್ಲೆಯ ವಿವಿಧೆಡೆ ತೀವ್ರ ಕಸದ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಗೆ ಸಭೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತು. ಈ ಸಂದರ್ಭ ಸೇವೆಯಿಂದ ನಿವೃತ್ತರಾಗಲಿರುವ ಅಪರ ಜಿಲ್ಲಾಧಿಕಾರಿ ಎಲ್.ಎ.ಎಸ್.ಶಶಿಧರನ್ ಪಿಳ್ಳ, ಎ.ಡಿ.ಎಂ. ಎ.ಕೆ.ರಾಮೇಂದ್ರನ್ ಅವರಿಗೆ ಸಭೆಯಲ್ಲಿ ಬೀಳ್ಕೊಡುಗೆ ನೀಡಲಯಿತು. ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರತಿನಿಧಿಗಳು, ರಾಷ್ಟ್ರೀಯ ಹೆದ್ದಾರಿ ಸೇವೆ ಮೊದಲಾದವರು ಉಪಸ್ಥಿತರಿದ್ದರು.