ಕಾಸರಗೋಡು: ಕೋಟ್ಟಾಯಂ ಜಿಲ್ಲೆಯ ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆಯ ಕೊಲೆ ಪ್ರಕರಣ ಖಂಡಿಸಿ ಕಳೆದ ಎರಡು ದಿವಸಗಳಿಂದ ನಡೆದುಬರುತ್ತಿದ್ದ ಮುಷ್ಕರವನ್ನು ವೈದ್ಯಕೀಯ ಸಂಘಟನೆಗಳು ಹಿಂತೆಗೆದುಕೊಂಡಿದೆ. ಕಾಸರಗೋಡು ಜನರಲ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಪ್ರತಿಭಟನೆ ಕೈಬಿಟ್ಟು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ) ಮತ್ತು ಕೇರಳ ಗವರ್ನಮೆಂಟ್ ಮೆಡಿಕಲ್ ಆಫೀಸರ್ಸ್ ಅಸೋಸಿಯೇಶನ್(ಕೆಜಿಎಂಓಎ)ಸಹಯೋಗದಲ್ಲಿ ಕೇರಳಾಧ್ಯಂತ 48ತಾಸುಗಳ ಕಾಲ ಹಮ್ಮಿಕೊಳ್ಳಲಾದ ಮುಷ್ಕರದ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ವೈದ್ಯರ ಜತೆಗೆ ಆರೋಗ್ಯ ಇಲಾಖೆ ಸಿಬ್ಬಂದಿಯೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕಾಸರಗೋಡು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಜನರಲ್ ಆಸ್ಪತ್ರೆಗಳಲ್ಲೂ ಪ್ರತಿಭಟನೆ ನಡೆಸಲಗಿತ್ತು.
ಕೋಟ್ಟಾಯಂ ನಿವಾಸಿ ಡಾ. ವಂದನಾ ರಾವ್(23)ಅವರನ್ನು ವಿಚಾರಣಾಧೀನ ಕೈದಿ, ಕೋಟ್ಟಾಯಂ ಕಡವತ್ತೂರ್ ಶಾಲಾ ಶಿಕ್ಷಕ ಸಂದೀಪ್(42)ಆಸ್ಪತ್ರೆ ಬಳಕೆಯ ಕತ್ತರಿಯಿಂದ ತಿವಿದು ಹತ್ಯೆಗೈದಿದ್ದನು.