ಅಹಮದಾಬಾದ್: ಇಲ್ಲಿನ ಕಚ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ 'ಲವ್ ಜಿಹಾದ್' ವಿರುದ್ಧದ ಆತ್ಮರಕ್ಷಣೆಗಾಗಿ 530 ಮಹಿಳೆಯರಿಗೆ ಕಠಾರಿಗಳನ್ನು ವಿತರಿಸಲಾಗಿದೆ.
ದ್ವೇಷಭಾಷಣದ ಆರೋಪದಲ್ಲಿ ಬಂಧಿಯಾಗಿ ಪ್ರಸ್ತುತ ಜಾಮೀನಿನ ಮೇರೆಗೆ ಹೊರಗಿರುವ ವಿವಾದಿತ ಬಲಪಂಥೀಯ ಕಾರ್ಯಕರ್ತೆ ಕಾಜಲ್ ಹಿಂದೂಸ್ತಾನಿ ಕೂಡಾ ಈ ಕಾರ್ಯಕ್ರಮದ ಭಾಗವಾಗಿದ್ದರು ಎನ್ನಲಾಗಿದೆ.
ಕಚ್ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಸುಮಾರು 700 ಮಹಿಳೆಯರು, ಬಿಜೆಪಿ ಶಾಸಕರು ಸೇರಿದಂತೆ ಸ್ಥಳೀಯ ರಾಜಕಾರಣಿಗಳು ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
'ನಿರ್ಣಾಯಕ ಸಂದರ್ಭಗಳಲ್ಲಿ ತಮ್ಮ ಆತ್ಮರಕ್ಷಣೆಯ ಭಾಗವಾಗಿ ಬಳಸಲು ಮಹಿಳೆಯರಿಗೆ ನಾವು 530 ಕಠಾರಿಗಳನ್ನು ಹಸ್ತಾಂತರಿಸಿದ್ದೇವೆ. ಇದು 'ಲವ್ ಜಿಹಾದ್' ವಿರುದ್ಧ ಹೋರಾಡಲು ಆಯೋಜಿಸಿದ್ದ ಮೂರು ದಿನಗಳ ಕಾರ್ಯಕ್ರಮವಾಗಿತ್ತು' ಎಂದು ಕಚ್ ಕಡ್ವಾ ಪಾಟಿದಾರ್ ಸಮಾಜದ ಪ್ರಧಾನ ಕಾರ್ಯದರ್ಶಿ ಹರ್‌ಸುಖ್ ರುಡಾನಿ ತಿಳಿಸಿದ್ದಾರೆ.
'ಸಮುದಾಯದ ವತಿಯಂದ ಇದೇ ಮೊದಲ ಬಾರಿಗೆ ಇಂಥ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶುಕ್ರವಾರ ನಡೆದ ಸಮಾರೋಪ ಸಮಾರಂಭದಲ್ಲಿ ವಿವಾದಿತ ಬಲಪಂಥೀಯ ಕಾರ್ಯಕರ್ತೆ ಕಾಜಲ್ ಶಿಂಗಾಲ ಅಲಿಯಾಸ್ ಹಿಂದೂಸ್ತಾನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು' ಎಂದು ಹರ್‌ಸುಖ್ ಮಾಹಿತಿ ನೀಡಿದ್ದಾರೆ.
ಗಿರ್ ಸೋಮನಾಥ್ ಜಿಲ್ಲೆಯ ಊನಾ ಪಟ್ಟಣದಲ್ಲಿ ಕೋಮು ಗಲಭೆಗೆ ಕಾರಣವಾದ ರಾಮನವಮಿ ಸಂದರ್ಭದಲ್ಲಿ ಕಾಜಲ್ ಅವರು 'ದ್ವೇಷ ಭಾಷಣ' ಮಾಡಿದ್ದ ಆರೋಪ ಹೊಂದಿದ್ದಾರೆ. ಪ್ರಸ್ತುತ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಕಾರ್ಯಕ್ರಮದ ಕುರಿತು ಕಚ್ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು 'ಪ್ರಜಾವಾಣಿ' ಸಂಪರ್ಕಿಸಿದಾಗ, 'ಈ ಕಾರ್ಯಕ್ರಮ ಬಗ್ಗೆ ನಮಗೆ ತಿಳಿದಿಲ್ಲ. ಈ ಬಗ್ಗೆ ಪರಿಶೀಲಿಸುವುದಾಗಿ' ಹೇಳಿದರು.
ಕಚ್ ಕಡ್ವಾ ಪಾಟಿದಾರ್ ಸಮಾಜವು ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯಲ್ಲಿ 'ಭಯ, ಪ್ರಚೋದನೆ ಇಲ್ಲವೇ ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ 'ಲವ್ ಜಿಹಾದ್' ವಿರುದ್ಧ ಹಿಂದೂ ಹೆಣ್ಣುಮಕ್ಕಳು ಜಾಗರೂಕರಾಗಿರಬೇಕು. ಇಂಥ ಅಲೆಮಾರಿಗಳಿಗೆ ತಕ್ಕಪಾಠ ಕಲಿಸಲು ಸಿದ್ಧರಾಗಿರಿ' ಎಂದು ಹೇಳಲಾಗಿದೆ.