ನವದೆಹಲಿ: ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಅವರನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಬೇಕೆಂದು ಪ್ರತಿಭಟನನಿರತ ಕುಸ್ತುಪಟುಗಳು ಬುಧವಾರ ಆಗ್ರಹಿಸಿದ್ದಾರೆ.
'ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ. ನಾನು ಸಭ್ಯ' ಎಂದು ಬ್ರಿಜ್ ಭೂಷಣ್ ಪ್ರತಿಕ್ರಿಯಿಸಿರುವ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ಈ ಬೇಡಿಕೆ ಇರಿಸಿದ್ದಾರೆ.
'ಬ್ರಿಜ್ ಭೂಷಣ್ ಪರ ಮಾತನಾಡಿವವರು ಮತ್ತು ನಾವೇ ಅವರ ವಿರುದ್ಧ ಸುಳ್ಳು ಹೇಳುತ್ತಿದ್ದೇವೆ ಎಂದು ಆರೋಪಿಸುತ್ತಿರುವವರಿಗೆ ನಾವು ಹೇಳುವುದೇನೆಂದರೆ, ನಾವು ಏಳು ಮಂದಿ ಮಹಿಳಾ ಕುಸ್ತಿಪಟುಗಳು ಮತ್ತು ಬ್ರಿಜ್ ಅವರನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ಅಡಿ ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಿ' ಎಂದು ಕುಸ್ತಿಪಟು ಸಾಕ್ಷಿ ಮಲಿಕ್ ಹೇಳಿದ್ದಾರೆ.
ಈ ಪರೀಕ್ಷೆಯಲ್ಲಿ ಯಾರು ದೋಷ ಸಾಬೀತಾಗುತ್ತದೆಯೋ ಅವರನ್ನು ಮರಣ ದಂಡನೆಗೆ ಗುರಿಪಡಿಸಿ' ಎಂದಿದ್ದಾರೆ.
ತಮಗೆ ಬೆಂಬಲ ಸೂಚಿಸುವಂತೆ ಸಾಕ್ಷಿ ಅವರು ದೇಶದ ಮಹಿಳೆಯರಲ್ಲಿ ಮನವಿ ಮಾಡಿದ್ದಾರೆ. '2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ಸಂದರ್ಭದಲ್ಲಿ ಅನ್ಯಾಯದ ವಿರುದ್ಧ ಧ್ವನಿಯೆತ್ತಿದ ಮಾದರಿಯಲ್ಲೇ, ಮಹಿಳಾ ಕುಸ್ತಿಪಟುಗಳ ಪರವಾಗಿಯೂ ಧ್ವನಿಯೆತ್ತಿ, ಬೆಂಬಲ ನೀಡಿ. ನಾವು ಕೂಡಾ ಮಹಿಳೆಯರ ಘನತೆಯ ಕಾರಣಕ್ಕೇ ಹೋರಾಡುತ್ತಿದ್ದೇವೆ. ಈ ಹೋರಾಟದಲ್ಲಿ ನಾವು ಗೆದ್ದರೆ, ದೇಶಕ್ಕೆ ಪ್ರಬಲ ಸಂದೇಶ ರವಾನಿಸಿದಂತಾಗುತ್ತದೆ. ಇಲ್ಲದಿದ್ದರೆ ನಾವು 50 ವರ್ಷಗಳು ಹಿಂದಕ್ಕೆ ಹೋಗುತ್ತೇವೆ' ಎಂದಿದ್ದಾರೆ.
'ಅಧಿಕಾರಿಗಳ ನಿಷ್ಕ್ರಿಯತೆ ವಿರುದ್ಧ ಪ್ರತಿಭಟನೆ ದಾಖಲಿಸಲು ಕೈಗೆ ಕಪ್ಪುಪಟ್ಟಿಗಳನ್ನು ಕಟ್ಟಿಕೊಂಡು ಗುರವಾರ ಪ್ರತಿಭಟನೆ ನಡೆಸುತ್ತೇವೆ' ಎಂದು ಮತ್ತೊಬ್ಬ ಕುಸ್ತಿಪಟು ವಿನೇಶಾ ಪೋಗಟ್ ಹೇಳಿದ್ದಾರೆ.
ರಾಷ್ಟ್ರೀಯ ಕ್ರೀಡಾಕೂಟದ ಆಯೋಜನೆ ಆಗದಂತೆ ತಡೆಯುವ ಉದ್ದೇಶದಿಂದ ಕುಸ್ತಿಪಟುಗಳು ಈ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಜನಸಾಮಾನ್ಯರ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಕುಸ್ತಿಪಟು ಬಜರಂಗ್ ಪೂನಿಯಾ, 'ನಾವು ರಾಷ್ಟ್ರೀಯ ಕ್ರೀಡಾಕೂಟದ ವಿರುದ್ಧ ಇಲ್ಲ. ಆದರೆ ಅದರಲ್ಲಿ ಬ್ರಿಜ್ ಭೂಷಣ್ ಭಾಗಿಯಾದರೆ ನಾವದನ್ನು ವಿರೋಧಿಸುತ್ತೇವೆ' ಎಂದಿದ್ದಾರೆ.
ಪಂಜಾಬ್‌ನಲ್ಲಿ ತರಬೇತಿ: ಬ್ರಿಜ್ ಭೂಷಣ್ ಸುಪರ್ದಿಯಲ್ಲಿರುವ ಭಾರತ ಕುಸ್ತಿ ಫೆಡರೇಷನ್- ಲಖನೌನಲ್ಲಿ ತರಬೇತಿ ಪಡೆಯಲು ಹಲವಾರು ಮಹಿಳಾ ಕುಸ್ತಿಪಟುಗಳು ಹಿಂದೇಟು ಹಾಕುತ್ತಿರುವ ಕಾರಣ ರಾಷ್ಟ್ರೀಯ ಮಹಿಳಾ ಕುಸ್ತಿ ತರಬೇತಿಯನ್ನು ಮುಂದಿನ ದಿನಗಳಲ್ಲಿ ಭಾರತದ ಕ್ರೀಡಾ ಪ್ರಾಧಿಕಾರದ ಪಂಜಾಬ್‌ನಲ್ಲಿಯ ಕೇಂದ್ರದಲ್ಲಿ ಆಯೋಜಿಸಲಾಗುವುದು ಎಂದು ಅಡ್‌ಹಾಕ್ ಸಮಿತಿ ಹೇಳಿದೆ.
ಎಫ್‌ಐಆರ್: ತನಿಖಾ ವರದಿ ಕೇಳಿದ ನ್ಯಾಯಾಲಯ
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತನಿಖಾ ಸ್ಥಿತಿಗತಿ ವರದಿ ನೀಡುವಂತೆ ದೆಹಲಿ ಪೊಲೀಸರಿಗೆ ದೆಹಲಿ ನ್ಯಾಯಾಲಯವೊಂದು ಬುಧವಾರ ಸೂಚಿಸಿದೆ.
ಪ್ರಕರಣದ ತನಿಖೆಯ ಮೇಲ್ವಿಚಾರಣೆ ವಹಿಸಬೇಕು ಮತ್ತು ಸಂತ್ರಸ್ತರು ಎನ್ನಲಾದವರ ಹೇಳಿಕೆಗಳನ್ನು ನ್ಯಾಯಾಲಯದ ಎದುರು ದಾಖಲಿಸಿಕೊಳ್ಳಬೇಕು ಎಂದು ಕೋರಿ ಕುಸ್ತಿಪಟುಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ ಅವರು ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದ್ದಾರೆ. ಈ ಅರ್ಜಿಯ ಮುಂದಿನ ವಿಚಾರಣೆಯನ್ನು ಮೇ 12ರಂದು ನಿಗದಿಪಡಿಸಲಾಗಿದೆ. ಅಂದೇ ತನಿಖಾ ವರದಿ ಸಲ್ಲಿಸಲು ಪೊಲೀಸರಿಗೆ ನ್ಯಾಯಾಲಯ ನಿರ್ದೇಶಿಸಿದೆ. ಈ ಮೊಕದ್ದಮೆಯ ತನಿಖೆ ನಡೆಸಲು ಪೊಲೀಸರು ಸಿದ್ಧರಿಲ್ಲ. ನ್ಯಾಯಾಲಯದ ಎದುರು ಸಂತ್ರಸ್ತರ ಹೇಳಿಕೆಯನ್ನೂ ಪೊಲೀಸರು ದಾಖಲಿಸಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಮುಂದುವರಿದ ರೈತರ ಬೆಂಬಲ: ಸಂಯುಕ್ತ ಕಿಸಾನ್ ಮೋರ್ಚಾ ಸೇರಿ ಹಲವು ರೈತ ಸಂಘಟನೆಗಳ ಸದಸ್ಯರು ಬುಧವಾರವೂ ದೆಹಲಿಯ ಜಂತರ್‌ಮಂತರ್‌ಗೆ ಆಗಮಿಸಿ ಪ್ರತಿಭಟನನಿರತ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದರು.