ಬೆನೌಲಿಂ: ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವ ಕ್ವಿನ್ ಗಾಂಗ್ ಅವರೊಂದಿಗೆ ಗುರುವಾರ ಇಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಶಾಂಘೈ ಸಹಕಾರ ಒಕ್ಕೂಟದ (ಎಸ್‌ಸಿಒ) ವಿದೇಶಾಂಗ ಸಚಿವರ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಲುವಾಗಿ ಗಾಂಗ್ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ.
'ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಬಾಂಧವ್ಯವನ್ನು ವೃದ್ಧಿಸುವ ವಿಚಾರವಾಗಿ ಗಾಂಗ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದೇನೆ. ಇದಕ್ಕಾಗಿ ಪೂರ್ವ ಲಡಾಖ್‌ನಲ್ಲಿನ ಗಡಿ ಬಿಕ್ಕಟ್ಟನ್ನು ಶಮನಗೊಳಿಸುವುದು ಹಾಗೂ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಶಾಂತಿ ಮರುಸ್ಥಾಪಿಸುವುದು ಬಹಳ ಮುಖ್ಯ ಎಂಬುದನ್ನೂ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ' ಎಂದು ಜೈಶಂಕರ್ ಗುರುವಾರ ಟ್ವೀಟ್ ಮಾಡಿದ್ದಾರೆ.
'ಎಸ್‌ಸಿಒ, ಬ್ರಿಕ್ಸ್ ಹಾಗೂ ಜಿ-20 ಗುಂಪಿಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತಾಗಿಯೂ ನಾವು ಮಾತುಕತೆ ನಡೆಸಿದ್ದೇವೆ' ಎಂದೂ ಅವರು ಹೇಳಿದ್ದಾರೆ.
'ಪೂರ್ವ ಲಡಾಖ್‌ನ ಗಡಿಯಲ್ಲಿ ಬಿಕ್ಕಟ್ಟು ಉದ್ಭವಿಸಿದ್ದರಿಂದಾಗಿ ಉಭಯ ದೇಶಗಳ ನಡುವಣ ಬಾಂಧವ್ಯವು ಹಳಸಿದೆ' ಎಂಬ ವಿಚಾರವನ್ನೂ ಜೈಶಂಕರ್ ಅವರು ಗಾಂಗ್ ಅವರ ಗಮನಕ್ಕೆ ತಂದಿದ್ದಾರೆ.
ಕಳೆದ ಎರಡು ತಿಂಗಳಲ್ಲಿ ಉಭಯ ಸಚಿವರು ಪರಸ್ಪರ ಮುಖಾಮುಖಿಯಾಗಿದ್ದು ಇದು ಎರಡನೇ ಬಾರಿ. ಗಾಂಗ್ ಅವರು ಜಿ-20 ಗುಂಪಿನ ವಿದೇಶಾಂಗ ಸಚಿವರ ಸಮಾವೇಶದಲ್ಲಿ ಭಾಗವಹಿಸುವ ಉದ್ದೇಶದಿಂದ ಈ ವರ್ಷದ ಮಾರ್ಚ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.
ರಷ್ಯಾ ಸಚಿವರೊಂದಿಗೆ ಚರ್ಚೆ: ಜೈಶಂಕರ್ ಅವರು ರಷ್ಯಾದ ವಿದೇಶಾಂಗ ಸಚಿವ ಸರ್ಗಿ ಲಾವರೊವ್ ಅವರೊಂದಿಗೂ ಗುರುವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಸುಮಾರು ಒಂದು ಗಂಟೆ ಕಾಲ ನಡೆದ ಸಭೆಯಲ್ಲಿ 'ಉಭಯ ದೇಶಗಳ ನಡುವಣ ಬಾಂಧವ್ಯ ಗಟ್ಟಿಗೊಳಿಸುವುದಕ್ಕಾಗಿ ನ್ಯಾಯೋಚಿತವಾದಂತಹ ಬಹು ಧ್ರುವೀಯ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸುವ ದಿಸೆಯಲ್ಲಿ ಒಗ್ಗೂಡಿ ಕೆಲಸ ಮಾಡುವುದಕ್ಕೆ ಪರಸ್ಪರರು ಒಪ್ಪಿಗೆ ಸೂಚಿಸಿದ್ದಾರೆ' ಎಂದು ರಷ್ಯಾದ ಪ್ರಕಟಣೆ ತಿಳಿಸಿದೆ.
'ದ್ವಿಪಕ್ಷೀಯ, ಜಾಗತಿಕ ಹಾಗೂ ಬಹುಪಕ್ಷೀಯ ಸಹಕಾರದ ಕುರಿತು ಲಾವರೊವ್ ಅವರೊಂದಿಗೆ ಸಮಗ್ರವಾಗಿ ಚರ್ಚಿಸಲಾಗಿದೆ. ಭಾರತವು ಎಸ್‌ಸಿಒ ಅಧ್ಯಕ್ಷತೆ ವಹಿಸಿಕೊಂಡಿರುವುದಕ್ಕೆ ರಷ್ಯಾ ಬೆಂಬಲ ಸೂಚಿಸಿದೆ. ಆ ದೇಶದ ನಿಲುವು ಸ್ವಾಗತಾರ್ಹವಾದುದು. ಬ್ರಿಕ್ಸ್ ಹಾಗೂ ಜಿ-20 ಗುಂಪಿಗೆ ಸಂಬಂಧಿಸಿದ ವಿಚಾರಗಳ ಕುರಿತೂ ಚರ್ಚೆ ನಡೆಸಲಾಗಿದೆ' ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.
'ಉಭಯ ಸಚಿವರು ವಿಶೇಷವಾಗಿ ರಕ್ಷಣಾ ಪಾಲುದಾರಿಕೆಗೆ ಸಂಬಂಧಿಸಿದ ಸಹಕಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವ್ಯಾಪಾರ ಸಂಬಂಧಿತ ವಿಚಾರಗಳ ಕುರಿತು ಉಭಯ ಸಚಿವರು ಮಾತುಕತೆ ನಡೆಸಿದ್ದಾರೆಯೇ ಇಲ್ಲವೇ ಎಂಬುದು ಗೊತ್ತಾಗಿಲ್ಲ.
ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಅವರು ಗುರುವಾರ ಗೋವಾಕ್ಕೆ ಬಂದಿಳಿದಿದ್ದಾರೆ. ಪಾಕಿಸ್ತಾನದ ಸಚಿವರೊಬ್ಬರು 2011ರ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದು ಭುಟ್ಟೊ ಅವರು ಇಲ್ಲಿ ನಿಗದಿಯಾಗಿರುವ ಶಾಂಘೈ ಸಹಕಾರ ಒಕ್ಕೂಟದ (ಎಸ್‌ಸಿಒ) ವಿದೇಶಾಂಗ ಸಚಿವರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. 'ಭುಟ್ಟೊ ಹಾಗೂ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆ ಇಲ್ಲ. ಈ ಸಂಬಂಧ ಪಾಕಿಸ್ತಾನ ಯಾವುದೇ ರೀತಿಯ ಆಸಕ್ತಿ ತೋರಿಲ್ಲ' ಎಂದು ಮೂಲಗಳು ತಿಳಿಸಿವೆ. 'ಗೋವಾಕ್ಕೆ ಭೇಟಿ ನೀಡಿರುವುದಕ್ಕೆ ಖುಷಿಯಾಗಿದೆ. ಈ ಸಮಾವೇಶವು ಯಶಸ್ವಿಯಾಗಲಿ ಎಂದು ಆಶಿಸುತ್ತೇನೆ. ಭೇಟಿಯ ಅವಧಿಯಲ್ಲಿ ಎಸ್‌ಸಿಒ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಸೌಹಾರ್ದಯುತ ನೆಲೆಯಲ್ಲಿ ಮಾತುಕತೆ ನಡೆಸುವತ್ತ ಮಾತ್ರ ಗಮನ ಕೇಂದ್ರೀಕರಿಸುತ್ತೇನೆ' ಎಂದು ಭುಟ್ಟೊ ಹೇಳಿದ್ದಾರೆ. ಪಾಕ್‌ನ ಬದ್ಧತೆಗೆ ಸಾಕ್ಷಿ (ಇಸ್ಲಾಮಾಬಾದ್ ವರದಿ): ಎಸ್‌ಸಿಒ ವಿದೇಶಾಂಗ ಸಚಿವರ ಸಮಾವೇಶದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ನಮ್ಮ ಸಚಿವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಈ ನಿಲುವು ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ' ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಗುರುವಾರ ತಿಳಿಸಿದ್ದಾರೆ.