ಕಾಸರಗೋಡು: ಪಡಿತರ ಅಂಗಡಿಗಳಿಗೆ ಹೋಗಿ ಪಡಿತರ ಪಡೆಯಲು ಸಾಧ್ಯವಾಗದ ಜನರ ಮನೆಗಳಿಗೆ ಪಡಿತರ ಸಾಮಗ್ರಿ ತಲುಪಿಸುವ ಯೋಜನೆಗೆ ಕಾಞಂಗಾಡಿನಲ್ಲಿ ಚಾಲನೆ ನೀಡಲಯಿತು. ಆಟೋರಿಕ್ಷಾ ಕಾರ್ಮಿಕರ ನೆರವಿನಿಂದ ಹೊಸದುರ್ಗ ತಾಲೂಕಿನಲ್ಲಿ ಯೋಜನೆ ಆರಂಭಿಸಲಾಗಿದೆ. ಕಾಞಂಗಾಡ್ ನಗರಸಭಾ ಮಟ್ಟದ ಕಾರ್ಯಕ್ರಮವನ್ನು ಮೈ ಕೇರಳ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳದ ವೇದಿಕೆಯಲ್ಲಿ ಉದ್ಘಾಟಿಸಿದರು. ಯೋಜನೆಯ ಮೂಲಕ, ಪಡಿತರ ಸಾಮಗ್ರಿಗಳನ್ನು ಮನೆಗಳಿಗೆ ತಲುಪಿಸುವ ಕಾರ್ಯ ಆರಂಭಿಸಲಾಗಿದೆ.
ಕಡು ಬಡವರು, ಹಾಸಿಗೆ ಹಿಡಿದಿರುವ ರೋಗಿಗಳು ಹಾಗೂ ನಿರ್ಗತಿಕರಿಗೆ ಪಡಿತರ ಸಾಮಗ್ರಿ ನೀಡುವ ಸರ್ಕಾರದ ಕ್ರಮವನ್ನು ಸ್ವಾಗತಿಸುವುದರ ಜತೆಗೆ ಯೋಜನೆಗೆ ಕೈಜೋಡಿಸಿರುವ ಆಟೋ ಕಾರ್ಮಿಕರ ಧೋರಣೆ ಶ್ಲಾಘನೀಯ ಎಂದು ಶಾಸಕ ಇ.ಚಂದ್ರಶೇಖರನ್ ತಿಳಿಸಿದರು. ಕಾಞಂಗಾಡು ನಗರಸಭೆ ಅಧ್ಯಕ್ಷ ಕೆ.ವಿ. ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಪಡಿತರ ವಿತರಣಾ ವಾಹನಗಳಿಗೆ ಹಸಿರು ನಿಶಾನಿ ತೋರಿಸುವ ಮೂಲಕ ಶಾಸಕ ಇ.ಚಂದ್ರಶೇಖರನ್ ಯೋಜನೆಗೆ ಔಪಚಾರಿಕ ಉದ್ಘಾಟನೆ ನೆರವೇರಿಸಿದರು.
ನಗರಸಭಾ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಸರಸ್ವತಿ ಉಪಸ್ಥಿತರಿದ್ದರು. ಜಿಲ್ಲಾ ನಾಗರಿಕ ಪಊರೈಕೆ ಅಧಿಕಾರಿ ಎನ್.ಜೆ.ಶಾಜಿಮೋನ್ ಸ್ವಾಗತಿಸಿದರು. ಹೊಸದುರ್ಗ ತಾಲೂಕು ಸರಬರಾಜು ಅಧಿಕಾರಿ ಕೆ.ಎನ್.ಬಿಂದು ವಂದಿಸಿದರು.
ಜಿಲ್ಲೆಯಲ್ಲಿ ಯೋಜನೆ ಜಾರಿಗೊಳಿಸಿದ ಮೊದಲ ತಾಲೂಕು ಎಂಬ ಹೆಗ್ಗಳಿಕೆಗೆ ಹೊಸದುರ್ಗ ಪಾತ್ರವಾಗಿದೆ. ತಾಲೂಕಿನ ಕಾಞಂಗಾಡಿ ನಗರಸ¨ಭೆ ವ್ಯಾಪ್ತಿಯಲ್ಲಿ ಆರು ಮಂದಿಯನ್ನು ಗುರುತಿಸಲಾಗಿದ್ದು, ಯೋಜನೆಯ ಮೂಲಕ ಕುಟುಂಬಗಳಿಗೆ ಪಡಿತರ ಹಂಚಿಕೆಯನ್ನು ನೀಡಲಾಗುತ್ತದೆ.