ನವದೆಹಲಿ: ಮಧ್ಯ ಹಿಂದೂ ಮಹಾಸಾಗರದಲ್ಲಿ ಮಂಗಳವಾರ ಮುಳುಗಡೆಗೊಂಡ ಚೀನಾದ ಮೀನುಗಾರಿಕಾ ಹಡಗಿನಲ್ಲಿದ್ದ 39 ಜನರ ರಕ್ಷಣೆಗೆ ಧಾವಿಸಿದ ಭಾರತದ ನಡೆಯನ್ನು ಚೀನಾ ಪ್ರಶಂಸಿಸಿದೆ.
ನವದೆಹಲಿ: ಮಧ್ಯ ಹಿಂದೂ ಮಹಾಸಾಗರದಲ್ಲಿ ಮಂಗಳವಾರ ಮುಳುಗಡೆಗೊಂಡ ಚೀನಾದ ಮೀನುಗಾರಿಕಾ ಹಡಗಿನಲ್ಲಿದ್ದ 39 ಜನರ ರಕ್ಷಣೆಗೆ ಧಾವಿಸಿದ ಭಾರತದ ನಡೆಯನ್ನು ಚೀನಾ ಪ್ರಶಂಸಿಸಿದೆ.
'ಭಾರತದಿಂದ ಸಿಕ್ಕ ಸಕಾಲಿಕ ಸಹಾಯವನ್ನು ನಿಜಕ್ಕೂ ಪ್ರಶಂಸಿಸುತ್ತೇವೆ' ಎಂದು ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿಯು ತಿಳಿಸಿದೆ.
ಚೀನಾದ ಮೀನುಗಾರಿಕಾ ಹಡಗಿನ ಹುಡುಕಾಟ ಮತ್ತು ರಕ್ಷಣೆಗಾಗಿ P-8I ಕಡಲ ಗಸ್ತು ವಿಮಾನವನ್ನು ನಿಯೋಜಿಸಲಾಗಿದೆ ಎಂದು ಭಾರತೀಯ ನೌಕಾಪಡೆ ಟ್ವೀಟ್ ಮಾಡಿತ್ತು. ಈ ಟ್ವೀಟ್ ಅನ್ನು ರೀ ಟ್ವೀಟ್ ಮಾಡಿಕೊಂಡಿರುವ ರಾಯಭಾರ ಕಚೇರಿ ಪ್ರಶಂಸೆ ವ್ಯಕ್ತಪಡಿಸಿದೆ.
ಇನ್ನೊಂದೆಡೆ, ಮುಳುಗಡೆಯಾದ ಮೀನುಗಾರಿಕಾ ಹಡಗು 'ಲುಪೆಂಗ್ ಯುವಾನ್ಯು 028'ನಲ್ಲಿದ್ದ 39 ಜನರ ಪೈಕಿ ಇಬ್ಬರ ಸಾವನ್ನು ಚೀನಾದ ಸಾರಿಗೆ ಇಲಾಖೆ ಗುರುವಾರ ದೃಢಪಡಿಸಿದೆ.
ಚೀನಾದ ನೌಕಾಪಡೆಯ ಮೂರು ಹಡಗುಗಳು ಮತ್ತು ಒಂದು ವಿದೇಶಿ ಹಡಗು ಸೇರಿದಂತೆ 10 ಹಡಗುಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಮತ್ತಷ್ಟು ಹಡಗುಗಳು ಆಗಮಿಸಲಿವೆ ಎಂದು ಸಚಿವಾಲಯ ತಿಳಿಸಿದೆ ಎಂದು ಸರ್ಕಾರಿ ವಾಹಿನಿ 'ಕ್ಸಿನ್ಹುವಾ' ವರದಿ ಮಾಡಿದೆ.
ಹಡಗಿನಲ್ಲಿ 17 ಚೀನೀಯರು, ಇಂಡೋನೇಷಿಯಾದ 17 ಮಂದಿ ಮತ್ತು ಐದು ಫಿಲಿಪೈನ್ ನಾವಿಕರು ಸೇರಿದಂತೆ 39 ಜನರಿದ್ದರು.