ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಕಂಡಿ ಅರಣ್ಯ ಪ್ರದೇಶದಲ್ಲಿ ಉಗ್ರರು ಶುಕ್ರವಾರ ನಡೆಸಿದ ಸ್ಫೋಟದಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, ಸೇನೆಯ ಮೇಜರ್ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಕಂಡಿ ಅರಣ್ಯ ಪ್ರದೇಶದಲ್ಲಿ ಉಗ್ರರು ಶುಕ್ರವಾರ ನಡೆಸಿದ ಸ್ಫೋಟದಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, ಸೇನೆಯ ಮೇಜರ್ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಯೋಧರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಮೂವರು ಉಧಂಪುರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ಹೇಳಿದ್ದಾರೆ.
ರಜೌರಿ ವಲಯದ ಅರಣ್ಯದಲ್ಲಿ ಉಗ್ರರು ಅವಿತಿರುವ ಮಾಹಿತಿ ಅರಿತು ಯೋಧರು ಶೋಧ ಕಾರ್ಯಾಚರಣೆ ನಡೆಸಿದರು. ಈ ವೇಳೆ ಗುಹೆಯೊಂದರಲ್ಲಿ ಅವಿತಿದ್ದ ಭಯೋತ್ಪಾದಕರು ಸ್ಫೋಟಕ ಸಾಧನಗಳನ್ನು ಬಳಸಿ ಯೋಧರ ಮೆಲೆ ದಾಳಿ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಜಮ್ಮುವಿನ ಭಾಟಾ ಧುರಿಯಾ ಪ್ರದೇಶದಲ್ಲಿ ಏಪ್ರಿಲ್ 20ರಂದು ಸೇನಾ ವಾಹನದ ಮೇಲೆ ಹೊಂಚು ದಾಳಿ ನಡೆಸಿದ್ದ ಉಗ್ರರೇ ಈ ಕೃತ್ಯ ಎಸಗಿದ್ದಾರೆ. ಅಂದಿನ ದಾಳಿಯಲ್ಲಿ ಭಾಗಿಯಾಗಿದ್ದವರ ಪೈಕಿ ಕೆಲ ಉಗ್ರರು ಈ ಪ್ರದೇಶದಲ್ಲಿ ಅವಿತಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಅದರ ಅನ್ವಯ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು ಎಂದೂ ಹೇಳಿದ್ದಾರೆ.
ಉಗ್ರರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ರಜೌರಿಯಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದೂ ವಿವರಿಸಿದ್ದಾರೆ.
ಈ ಪ್ರದೇಶದಲ್ಲಿ ದಟ್ಟ ಅರಣ್ಯ ಇದ್ದು, ನೈಸರ್ಗಿಕವಾಗಿಯೇ ಗುಹೆ ರೀತಿಯ ರಚನೆಗಳೂ ಇವೆ. ಉಗ್ರರಿಗೆ ಕೆಲ ಸ್ಥಳೀಯರು ಆಹಾರ ಸೇರಿದಂತೆ ಇತರ ನೆರವು ಒದಗಿಸುತ್ತಿದ್ದಾರೆ. ಇದೇ ಕಾರಣಕ್ಕೆ, ಅವಿತುಕೊಳ್ಳಲು ಉಗ್ರರು ಈ ಸ್ಥಳವನ್ನೇ ಬಳಸಿಕೊಳ್ಳುತ್ತಿರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.