ವಾಷಿಂಗ್ಟನ್: 'ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ಅಮೆರಿಕಕ್ಕೆ ನೀಡಲಿರುವ ಭೇಟಿ ಐತಿಹಾಸಿಕವಾಗಲಿದ್ದು, ಉಭಯ ದೇಶಗಳ ನಡುವಿನ ಬಾಂಧವ್ಯವು ಜನಪರ ಮತ್ತು ಜನ ಕೇಂದ್ರೀತ ಎಂಬುದಕ್ಕೆ ಒತ್ತು ನೀಡಲಿದೆ' ಎಂದು ಅಮೆರಿಕದಲ್ಲಿನ ಭಾರತದ ರಾಯಭಾರಿ ತರಂಜೀತ್ ಸಿಂಗ್ ಸಂಧು ಹೇಳಿದರು.
'ಉದ್ದೇಶಿತ ಭೇಟಿಯ ಸಂದರ್ಭದಲ್ಲಿ ಅಧ್ಯಕ್ಷ ಜೋ ಬೈಡನ್ ಅವರು ಪ್ರಧಾನಿ ಮೋದಿ ಅವರ ಗೌರವಾರ್ಥ ಜೂನ್ 22ರಂದು ಔತಣಕೂಟವನ್ನು ಆಯೋಜಿಸಿದ್ದಾರೆ' ಎಂದು ಶ್ವೇತಭವನ ಬುಧವಾರ ಪ್ರಕಟಿಸಿದೆ.
ಪ್ರಧಾನಿ ಭೇಟಿಯು ಉಭಯ ದೇಶಗಳ ನಡುವಿನ ಬಾಂಧವ್ಯ ಗಟ್ಟಿಗೊಳಿಸಲಿದೆ ಮತ್ತು ಅಮೆರಿಕನ್ನರು ಮತ್ತು ಭಾರತೀಯರ ನಡುವಿನ ಸಂಪರ್ಕ ವೃದ್ಧಿಸಲಿದೆ' ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೀನ್ ಜೀನ್ ಪಿಯರ್ ಅವರು ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಭೇಟಿ ಕುರಿತಂತೆ ಮಾತನಾಡಿದ ಸಂಧು ಅವರು, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಬೈಡನ್ ಇಬ್ಬರೂ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಗಣನೀಯ ಕೊಡುಗೆಯನ್ನು ನೀಡಿದ್ದಾರೆ. ಉದ್ದೇಶಿತ ಭೇಟಿಯು ಉಭಯ ನಾಯಕರಿಗೆ ಪ್ರಗತಿ ಪರಿಶೀಲಿಸಲು ಮತ್ತು ಅಗತ್ಯ ಮಾರ್ಗದರ್ಶನ ನೀಡಲು ವೇದಿಕೆಯಾಗಲಿದೆ' ಎಂದರು.
'ಉಭಯ ದೇಶಗಳ ನಡುವಿನ ಪಾಲುದಾರಿಕೆ, ಬಾಂಧವ್ಯ ವಿಶ್ವದ ದೃಷ್ಟಿಯಿಂದ ಜನಕೇಂದ್ರೀತ ಮತ್ತು ಜನಪರವಾದುದಾಗಿದೆ. ಇದು, ಕೇವಲ ಉಭಯ ದೇಶಗಳ ನಡುವಿನ ಸಂಬಂಧವಷ್ಟೇ ಅಲ್ಲ' ಎಂದರು.
ಜೀನ್ ಪೀಯರ್ ಅವರು, ನಾಯಕರ ಉದ್ದೇಶಿತ ಭೇಟಿಯು ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸಲಿದೆ. ರಕ್ಷಣೆ, ಇಂಧನ ಮತ್ತು ಬಾಹ್ಯಾಕಾಶ ಕ್ಷೇತ್ರ ಸೇರಿದಂತೆ ವಿವಿಧ ವಲಯಗಳಲ್ಲಿ ಕಾರ್ಯತಂತ್ರ, ತಾಂತ್ರಿಕ ಪ್ರಗತಿ ಕುರಿತ ವಿನಿಮಯ ಸಂಬಂಧ ಮುಕ್ತ ಚರ್ಚೆಗೆ ವೇದಿಕೆಯಾಗಲಿದೆ ಎಂದರು.