ಕಾಸರಗೋಡು: ಸಮಸ್ಯೆಗಳ ಸರಮಾಲೆಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆ ನಲುಗಿಹೋಗಿದ್ದು, ಯಾವುದೇ ರೀತಿಯ ಮನವಿ, ಪ್ರತಿಭಟನೆ, ಹೋರಾಟಗಳಿಗೆ ಸರ್ಕಾರ ಮಾತ್ರ ಜಪ್ಪೆನ್ನುತ್ತಿಲ್ಲ. 2016-17ನೇ ಸಾಲಿನಲ್ಲಿ ನಬಾರ್ಡ್ ಯೋಜನೆಯನ್ವಯ ಮಂಜೂರಾಗಿ ಲಭಿಸಿದ ಕಟ್ಟಡದ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ಕಾಸರಗೋಡು ಜನರಲ್ ಆಸ್ಪತ್ರೆಯ ಕಟ್ಟಡಗಳ ಶೋಚನೀಯಾವಸ್ಥೆ, ಸ್ಥಳಾವಕಾಶದ ಕೊರತೆ ಹಿನ್ನೆಲೆಯಲ್ಲಿ ಹೊಸ ಕಟ್ಟಡವನ್ನು ಮಂಜೂರುಗೊಳಿಸಲಾಗಿತ್ತು. ಇರುವ ಕಟ್ಟಡದ ಲಿಫ್ಟ್ ನಿರಂತರ ದುರಸ್ತಿಯಲ್ಲಿರುವುದರಿಂದ ಆಸ್ಪತ್ರೆಯ ದೈನಂದಿನ ಚಟುವಟಿಕೆಗೆ ಅಡಚಣೆಯುಂಟಾಗುತ್ತಿದೆ. ಇಲ್ಲಿ ಲಿಫ್ಟ್ ಕೈಕೊಟ್ಟಲ್ಲಿ ಸೂಕ್ತ ರ್ಯಾಂಪ್ ವ್ಯವಸ್ಥೆಯೂ ಇಲ್ಲದಿರುವುದರಿಂದ ರೋಗಿಗಳನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಯಾ ಸ್ಟ್ರೆಚರ್‍ನಲ್ಲಿ ಮಲಗಿಸಿ ಹೊತ್ತುಕೊಂಡು ಮೇಲೆ, ಕೆಳಕ್ಕಿಳಿಯಬೇಕಾದ ಅನಿವಾರ್ಯತೆಯಿದೆ. ವರ್ಷದಲ್ಲಿ ಕೆಲವೇ ತಿಂಗಳು ಮಾತ್ರ ಸೂಕ್ತರೀತಿಯಲ್ಲಿ ಚಟುವಟಿಕೆ ನಡೆಸುವ ಲಿಫ್ಟ್ ಉಳಿದ ಬಹುತೇಕ ತಿಂಗಳು ಸ್ಥಗಿತಗೊಂಡಿರುತ್ತದೆ. ಪ್ರಸಕ್ತ ಒಂದು ತಿಂಗಳಿಂದ ಲಿಫ್ಟ್ ಸರಿಯಿಲ್ಲದೆ, ಇಲ್ಲಿ ರೋಗಿಗಳನ್ನು ಹೊತ್ತು ಸಾಗಿಸುವ ದುರವಸ್ಥೆ ಎದುರಾಗಿದೆ. ಜನರಲ್ ಆಸ್ಪತ್ರೆಗೆ ತೆರಳುವ ರಸ್ತೆಯೂ ನಾದುರಸ್ತಿಯಲ್ಲಿದೆ. ಇಲ್ಲಿನ ಶವಮಹಜರು ನಡೆಸುವ ಕಟ್ಟಡವೂ ಹಳೇಯದ್ದಾಗಿದ್ದು, ಶಿಥಿಲಾವಸ್ಥೆಯಲ್ಲಿದೆ.
ಇನ್ನು ಹೊಸ ಕಟ್ಟಡದ ಕಾಮಗಾರಿ ಪೂರ್ತಿಗೊಂಡು ಯಾವಾಗ ತೆರೆದುಕೊಳ್ಳುವುದೆಂಬ ಬಗ್ಗೆ ಅಧಿಕಾರಿಗಳಲ್ಲೇ ಸ್ಪಷ್ಟತೆಯಿಲ್ಲದಾಗಿದೆ. ಶಿಲಾನ್ಯಾಸಗೊಮಡು ಎರಡು ಬಾರಿ ದಿನಾಂಕ ವಿಸ್ತರಿಸಿ ನೀಡಿದ್ದರೂ, ಇನ್ನೂ ಕಾಮಗಾರಿ ಪೂರ್ತಿಗೊಳಿಸಲಾಗಿಲ್ಲ. ಬಡಜನತೆಯ ಆಶಾಕಿರಣವಾಗಿರುವ ಜನರಲ್ ಆಸ್ಪತ್ರೆಯನ್ನು ಚಿಕಿತ್ಸೆಗಾಗಿ ದಿನವೊಂದಕ್ಕೆ ನೂರಾರು ಜನರು ಆಶ್ರಯಿಸುತ್ತಿದ್ದು, ಇಲ್ಲಿ ಮೂಲ ಸೌಕರ್ಯ ಒದಗಿಸಿಕೊಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬುದಾಗಿ ನಾಗರಿಕರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ದೂರುತ್ತಾರೆ. ಆರೋಗ್ಯ, ಶಿಕ್ಷಣ ಸೇರಿದಂತೆ ಪ್ರಮುಖ ವಲಯವನ್ನು ಸರ್ಕಾರ ಕಡೆಗಣಿಸುತ್ತಿರುವ ಫಲವಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಗಳು, ಶಿಕ್ಷಣ ವಲಯವೂ ಅಭಿವೃದ್ಧಿ ಕಾಣುತ್ತಿಲ್ಲ. ಇದರಿಂದ ಜಿಲ್ಲೆಯ ಜನತೆ ಸಹಜವಾಗಿ ನೆರೆಯ ಕರ್ನಾಟಕ ಹಾಗೂ ಇತರ ಜಿಲ್ಲೆಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ.