ಪಾಟ್ನಾ: ಬಿಹಾರದ ಅರೇರಿಯಾ ಜಿಲ್ಲೆಯ ಫೊರ್ಬೆಸ್‌ಗಂಜ್ ಎಂಬಲ್ಲಿನ ಸರ್ಕಾರಿ ಶಾಲೆಯಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ನೀಡಿದ ಮಧ್ಯಾಹ್ನದ ಊಟದಲ್ಲಿ ಹಾವು ಪತ್ತೆಯಾದ ಘಟನೆ ಭಾರೀ ಆತಂಕಕ್ಕೆ ಕಾರಣವಾಯಿತು. ಈ ಆಹಾರ ಸೇವಿಸಿದ ಡಜನುಗಟ್ಟಲೆ ವಿದ್ಯಾರ್ಥಿಗಳು ಅಸೌಖ್ಯಕ್ಕೀಡಾಗಿ ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತು.
ಎನ್‌ಜಿಒ ಒಂದು ಸಿದ್ಧಪಡಿಸಿದ್ದ ಖಿಚಡಿಯನ್ನು ಮಕ್ಕಳಿಗೆ ನೀಡಲಾಗುತ್ತಿದ್ದಾಗ ಒಂದು ಪ್ಲೇಟಿನಲ್ಲಿ ಹಾವು ಪತ್ತೆಯಾಗಿತ್ತು. ಈ ಸುದ್ದಿ ಹರಡುತ್ತಿದ್ದಂತೆ ಆಹಾರ ವಿತರಣೆ ನಿಲ್ಲಿಸಲಾಯಿತು. ಅದಾಗಲೇ ಈ ಆಹಾರ ಸೇವಿಸಿದ್ದ ವಿದ್ಯಾರ್ಥಿಗಳು ವಾಂತಿ ಮಾಡಲು ಆರಂಭಿಸಿದ್ದರು ಹಾಗೂ ಅವರೆಲ್ಲರನ್ನೂ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.
ಹಿರಿಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ತನಿಖೆ ಆರಂಭಿಸಲಾಗಿದೆ.