HEALTH TIPS

ವಿದೇಶಿಯರೆಂದು ಘೋಷಿಸಲ್ಪಟ್ಟವರು ಆಸ್ತಿ ಹಕ್ಕು, ಕಲ್ಯಾಣ ಯೋಜನೆಗಳಿಗೆ ಅರ್ಹರಲ್ಲ: ಹೈಕೋರ್ಟ್ ನಲ್ಲಿ ಕೇಂದ್ರದ ವಾದ

               ಗುವಾಹಟಿ: ವಿದೇಶಿಯರು ಎಂದು ಘೋಷಿಸಲಾಗಿರುವವರು ಯಾವುದೇ ಕಲ್ಯಾಣ ಯೋಜನೆಗಳಿಗೆ ಅರ್ಹರಲ್ಲ ಮತ್ತು ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕೇಂದ್ರ ಸರಕಾರವು ನ್ಯಾಯಾಲಯದಲ್ಲಿ ವಾದಿಸಿದೆ ಎಂದು scroll.in ವರದಿ ಮಾಡಿದೆ.

                ಕಳೆದ ವಾರ ಗುವಾಹಟಿ ಉಚ್ಚ ನ್ಯಾಯಾಲಯದಲ್ಲಿ ಕೇಂದ್ರದ ಪರ ಸಹಾಯಕ ಸಾಲಿಸಿಟರ್ ಜನರಲ್ ಆರ್ಕೆಡಿ ಚೌಧುರಿ ಈ ವಾದವನ್ನು ಮಂಡಿಸಿದರು. ಅಸ್ಸಾಮಿನ ವಿದೇಶಿಯರ ನ್ಯಾಯಮಂಡಳಿಗಳಿಂದ ವಿದೇಶಿಯರು ಎಂದು ಘೋಷಿತ ವ್ಯಕ್ತಿಗಳ ಅರ್ಹತೆಗಳನ್ನು ನ್ಯಾಯಾಲಯವು ಪರಿಶೀಲಿಸುತ್ತಿದೆ.

                       ವಿದೇಶಿಯರೆಂದು ಘೋಷಿತ ವ್ಯಕ್ತಿಗಳು ಸಂವಿಧಾನದ ವಿಧಿ 21ರಡಿ ರಕ್ಷಣೆಗೆ ಮಾತ್ರ ಅರ್ಹರಾಗಿದ್ದಾರೆ ಎಂದು ಚೌಧುರಿ ವಾದಿಸಿದರು. ಈ ವಿಧಿಯು ದೇಶದ ಪ್ರಜೆಗಳು ಮತ್ತು ವಿದೇಶಿಯರು ಸೇರಿದಂತೆ ಪ್ರತಿಯೋರ್ವ ವ್ಯಕ್ತಿಗೆ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಯನ್ನು ಖಾತರಿಪಡಿಸಿದೆ.

                ವಿಧಿ 21ರಡಿ ಅರ್ಹತೆಗಳಲ್ಲಿ ಸರಕಾರದ ಕಲ್ಯಾಣ ಯೋಜನೆಗಳು ಸೇರಿಲ್ಲ,ಈ ಯೋಜನೆಗಳು ದೇಶದ ಪ್ರಜೆಗಳಿಗೆ ಮಾತ್ರ ಸಂಬಂಧಿಸಿವೆ ಎಂದು ಹೇಳಿದ ಚೌಧುರಿ, ಘೋಷಿತ ವಿದೇಶಿಯರ ಆಸ್ತಿ ಹಕ್ಕುಗಳನ್ನು ರದ್ದುಗೊಳಿಸಬೇಕು. ಘೋಷಿತ ವಿದೇಶಿಯನ ಭೂ ಮಾಲಕತ್ವವು ಈ ದೇಶದ ಕಾನೂನಿಗೆ ವಿರುದ್ಧವಾಗಿದೆ ಮತ್ತು ಅದು ತೊಲಗಬೇಕಿದೆ. ಇಂತಹ ವ್ಯಕ್ತಿಯ ಆಸ್ತಿಯನ್ನು ಸರಕಾರಕ್ಕೆ ಮರಳಿಸಬೇಕೇ ಹೊರತು ಅದನ್ನು ಮಾರಾಟ ಮಾಡಿದ ವ್ಯಕ್ತಿಗಲ್ಲ ಎಂದೂ ವಾದಿಸಿದರು.

ಅಸ್ಸಾಮಿನ ಮೋರಿಗಾಂವ್ ಜಿಲ್ಲೆಯ ಜರಿಬೋರ್ ಗ್ರಾಮದ ನಿವಾಸಿ ಮುಹಮ್ಮದ್ ಮೈನುಲ್ ಹಕ್ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿದೆ. ಮೋರಿಗಾಂವ್ನ ವಿದೇಶಿಯರ ನ್ಯಾಯಮಂಡಳಿಯು 2016,ಮೇ 23ರಂದು ಕೃಷಿಕಾರ್ಮಿಕರಾಗಿರುವ ಹಕ್ ಅವರನ್ನು ವಿದೇಶಿಯ ಎಂದು ಘೋಷಿಸಿತ್ತು. ಇದನ್ನು ಹಕ್ ಗುವಾಹಟಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರಾದರೂ ಅದು 2018,ಮಾ.7ರಂದು ನ್ಯಾಯಮಂಡಳಿಯ ತೀರ್ಪನ್ನು ಎತ್ತಿ ಹಿಡಿದಿತ್ತು.

                         ಸೆಪ್ಟೆಂಬರ್ 2022ರಲ್ಲಿ ಹಕ್ ವಿರುದ್ಧ ಬಾರ್ಡರ್ ಪೊಲೀಸ್ನ ಎರಡನೇ ದೂರನ್ನು ಉಲ್ಲೇಖಿಸಿ ಮೋರಿಗಾಂವ್ ನ್ಯಾಯಮಂಡಳಿಯು ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಬಾರ್ಡರ್ ಪೊಲೀಸ್ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ನಿಯೋಜಿಸಲ್ಪಟ್ಟಿರುವ ಅಸ್ಸಾಂ ಪೊಲೀಸ್ ನ ವಿಶೇಷ ಘಟಕವಾಗಿದೆ. ಅಕ್ಟೋಬರ್ ನಲ್ಲಿ ಹಕ್ ನ್ಯಾಯಮಂಡಳಿಯ ಎದುರು ಹಾಜರಾದಾಗ, ಅವರನ್ನು ಈಗಾಗಲೇ ವಿದೇಶಿಯ ಎಂದು ಘೋಷಿಸಿರುವುದನ್ನು ಗಮನಿಸಿದ ಅದು ಅವರನ್ನು ಬಂಧಿಸುವಂತೆ ಜಿಲ್ಲಾ ಪೊಲೀಸರಿಗೆ ಆದೇಶಿಸಿತ್ತು. ಹಕ್ರನ್ನು ತಕ್ಷಣ ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಲಾಗಿತ್ತು.

ಎರಡನೇ ಪ್ರಕರಣದಲ್ಲಿ ತನ್ನನ್ನು ಬಂಧಿಸಲು ಸಾಧ್ಯವಿಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಪರಿಹಾರವನ್ನು ಕೋರಿ ಹಕ್ ತನ್ನ ವಕೀಲ ಝುಬೈರ್ ಹಮ್ಮದ್ರ ಮೂಲಕ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. ಹಕ್ ಅವರನ್ನು ವಿದೇಶಿಯ ಎಂದು ಘೋಷಿಸಿರುವ ತನ್ನ ಆದೇಶವನ್ನು ಅನುಸರಿಸುವಂತೆ 2018ರಲ್ಲಿ ಉಚ್ಚ ನ್ಯಾಯಾಲಯವು ಜಿಲ್ಲಾ ಪೊಲೀಸರಿಗೆ ಆದೇಶಿಸಿದ್ದರಿಂದ ಅವರ ಬಂಧನವು ಅಕ್ರಮವಾಗಿದೆ ಎಂದು ಹಮ್ಮದ್ ವಾದಿಸಿದ್ದರು.

ಅಸ್ಸಾಮಿನಲ್ಲಿ ಘೋಷಿತ ವಿದೇಶಿಯರನ್ನು ಬಂಧನ ಕೇಂದ್ರಗಳಲ್ಲಿ ಇರಿಸಲಾಗುತ್ತಿದ್ದು,ಇವುಗಳು ಗಡಿಪಾರಿಗೆ ಮುನ್ನ ಅವರ ಸ್ಥಳಾಂತರ ಶಿಬಿರಗಳಾಗಿವೆ.

                   ಆದರೆ ಘೋಷಿತ ವಿದೇಶಿಯರ ಅರ್ಹತೆಗಳನ್ನು ಪರಿಶೀಲಿಸುತ್ತಿರುವ ಗುವಾಹಟಿ ಉಚ್ಚ ನ್ಯಾಯಾಲಯದ ಪೀಠವು ವಿಷಯದ ಬಗ್ಗೆ ವಿಶಾಲ ದೃಷ್ಟಿಕೋನವನ್ನು ತಳೆದಿದೆ. ಹೆಚ್ಚಿನ ಪ್ರಕರಣಗಳಲ್ಲಿ ಗಡಿಪಾರು ಪ್ರಕ್ರಿಯೆಯು ಸಾಧ್ಯತೆಯ ವ್ಯಾಪ್ತಿಯಿಂದ ಹೊರಗಿರುವುದರಿಂದ ಪೀಠವು ಘೋಷಿತ ವಿದೇಶಿರಿಗೆ ಲಭ್ಯವಿರುವ ಹಕ್ಕುಗಳು ಮತ್ತು ಕಾನೂನಿನಡಿ ಅವರು ಅರ್ಹರಾಗಿರದ ಹಕ್ಕುಗಳ ಕುರಿತು ಮೌಲ್ಯಮಾಪನ ನಡೆಯಬೇಕು ಎಂದು ಹೇಳಿದೆ. ಈ ಬಗ್ಗೆ ತಮ್ಮ ವಾದಗಳನ್ನು ಮಂಡಿಸುವಂತೆ ಪೌರತ್ವ ಬಿಕ್ಕಟ್ಟಿನಲ್ಲಿ ಸಿಲುಕಿರುವ ಜನರನ್ನು ಆಗಾಗ್ಗೆ ಪ್ರತಿನಿಧಿಸುವ ವಕೀಲರಾದ ಎಚ್‌ಆರ್‌ಎ ಚೌಧುರಿ ಮತ್ತು ಡಿ ಘೋಷ್ ಹಾಗು ಅಸ್ಸಾಮಿನ ಹೆಚ್ಚುವರಿ ಅಡ್ವೋಕೇಟ್ ಜನರಲ್ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಚೌಧುರಿಯವರಿಗೆ ಪೀಠವು ಫೆ.22ರಂದು ಸೂಚಿಸಿತ್ತು.

                    ಎ.14ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಎರಡೂ ಕಡೆಗಳ ವಕೀಲರ ವಾದಗಳನ್ನು ಆಲಿಸಿದ ನ್ಯಾ.ಎ.ಎಂ.ಬಿ.ಬರುವಾ ಅವರು, 'ಘೋಷಿತ ವಿದೇಶಿಯರು ಯಾವುದೇ ಅವಧಿಗೆ ಈ ದೇಶದಲ್ಲಿ ಉಳಿಯಬೇಕಿದ್ದರೆ ಅವರನ್ನು ಮೂಲಭೂತ ಮಾನವೀಯ ದೃಷ್ಟಿಯಿಂದ ನೋಡಬೇಕು. ಅದನ್ನು ನಾವು ಕಿತ್ತುಕೊಳ್ಳಬಾರದು 'ಎಂದು ಮೌಖಿಕವಾಗಿ ತಿಳಿಸಿದರು.

                ಅವರಿಗೆ ಶಿಕ್ಷಣವನ್ನು ನೀಡಿ,ಅವರು ದೇಶಕ್ಕೆ ಉತ್ತಮ ಆಸ್ತಿಯಾಗಿದ್ದರೆ ಅವರನ್ನು ಬಳಸಿಕೊಳ್ಳಿ. ಅದು ನಮಗೇ ಒಳ್ಳೆಯದು,ನೀವು ಅವರಿಗೆ ಶಿಕ್ಷಣವನ್ನು ನೀಡಬಹುದು ಮತ್ತು ಕೌಶಲ್ಯಪೂರ್ಣರಾಗಿಸಬಹುದು ಮತ್ತು ಅವರು ಇತರ ದೇಶಕ್ಕೆ ಮರಳಲು ಅವಕಾಶ ನೀಡಬಹುದು ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries