ಬದಿಯಡ್ಕ: ಪಶು ಸಂಗೋಪನಾ ಇಲಾಖೆಯ ಆಶ್ರಯದಲ್ಲಿ ಜಿಲ್ಲೆಯಲ್ಲಿ 5-8 ತಿಂಗಳ ಹಸು ಮತ್ತು ಎಮ್ಮೆಗಳಿಗೆ ಬ್ರೂಸೆಲ್ಲೋಸಿಸ್ ವಿರುದ್ಧ ಲಸಿಕೆ ಹಾಕುವ ಕಾರ್ಯ ಆರಂಭವಾಗಿದೆ. ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಶಹನವಾಸ್ ಪಾದೂರು ಅವರು ನೀರ್ಚಾಲು ಸಮೀಪದ ಬೇಳದಲ್ಲಿರುವ ಕಾಸರಗೋಡು ಕುಳ್ಳ ತಳಿ ಸಂವರ್ಧನೆ ಕೇಂದ್ರದಲ್ಲಿ ಉದ್ಘಾಟಿಸಿದರು. ಉಪನಿರ್ದೇಶಕ ಡಾ.ಜಯಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಶಾಂತಾ, ಸಿವಿಒ, ಡಿವಿಸಿ ಡಾ. ಓ.ಎಂ.ಅಜಿತಾ, ವಾರ್ಡ್ ಸದಸ್ಯರಾದ ಸ್ವಪ್ನಾ, ಶ್ಯಾಮಪ್ರಸಾದ್, ಹಿರಿಯ ಪಶು ವೈದ್ಯಾಧಿಕಾರಿ ಡಾ. ಮುರಳೀಧರನ್ ಮಾತನಾಡಿದರು. ಎಡಿಸಿಪಿ ಸಂಯೋಜಕ ಡಾ.ಎಸ್.ಮಂಜು ಸ್ವಾಗತಿಸಿ, ಬೇಳ ಗೋಶಾಲೆಯ ಸಹಾಯಕ ನಿರ್ದೇಶಕ ಡಾ. ಬಿಜು ಬಾಲ್ ವಂದಿಸಿದರು.
ನಾಲ್ಕರಿಂದ ಎಂಟು ತಿಂಗಳ ಕರುಗಳು ಮತ್ತು ಎಮ್ಮೆಗಳಿಗೆ (ಹೆಣ್ಣು ಕರುಗಳಿಗೆ) ಲಸಿಕೆ ಹಾಕಲಾಗುತ್ತದೆ. ಜಿಲ್ಲಾ ಪಶು ಕಲ್ಯಾಣಾಧಿಕಾರಿ ಡಾ.ಬಿ.ಸುರೇಶ್ ಮಾಹಿತಿ ನೀಡಿ, ಒಂದೇ ಲಸಿಕೆಯಿಂದ ರೋಗವನ್ನು ತಡೆಗಟ್ಟಬಹುದಾಗಿದ್ದು, ರೈತರು ಈ ಅವಕಾಶವನ್ನು ಗರಿಷ್ಠವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.