ಕಣ್ಣೂರು; ಮಾದಕ ದ್ರವ್ಯ ವಿರೋಧಿ ಚಟುವಟಿಕೆಗಳನ್ನು ತೀವ್ರಗೊಳಿಸುವ ಭಾಗವಾಗಿ ಪ್ರತಿ ಶಾಲೆಯಲ್ಲಿ ನಿರ್ದಿಷ್ಟ ಸಂಖ್ಯೆಯ ಮಕ್ಕಳಿಗೆ ಶಿಕ್ಷಕರನ್ನು ಮಾರ್ಗದರ್ಶಕರನ್ನಾಗಿ ನಿಯೋಜಿಸಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿರುವರು.
ಮುಳಪ್ಪಿಲಂಗಾಡ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ರಾಜ್ಯದಲ್ಲಿ ನೂತನವಾಗಿ ನಿರ್ಮಿಸಲಾದ 97 ಶಾಲಾ ಕಟ್ಟಡಗಳ ಉದ್ಘಾಟನೆ ಮುಖ್ಯಮಂತ್ರಿ ನಿರ್ವಹಿಸಿ ಮಾತನಾಡಿದರು.
ಮಕ್ಕಳ ನಡವಳಿಕೆಯಲ್ಲಿ ಅಸಹಜತೆ ಕಂಡು ಬಂದರೆ ಅದನ್ನು ಮುಚ್ಚಿಡುವ ಬದಲು ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕು. ಮಕ್ಕಳು ದಾರಿ ತಪ್ಪದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಪೊಲೀಸರು ಮತ್ತು ಅಬಕಾರಿ ಇಲಾಖೆ ನೆರವಿಗೆ ಬರಲಿದೆ. ವ್ಯಸನಿಯಾಗಿರುವ ಮಗುವಿಗೆ ಮತ್ತು ಪೋಷಕರಿಗೆ ಸಮಾಲೋಚನೆ ಲಭ್ಯವಾಗುವಂತೆ ಮಾಡಬೇಕು.
ಶಾಲಾ ಆವರಣದಲ್ಲಿ ಅಮಲು ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳು ಕಾರ್ಯನಿರ್ವಹಿಸದಂತೆ ಸ್ಥಳೀಯಾಡಳಿತಗಳು ಖಚಿತಪಡಿಸಿಕೊಳ್ಳಬೇಕು. ಡ್ರಗ್ಸ್ ಮಾಫಿಯಾ ವಿರುದ್ಧ ಸ್ಥಳೀಯಾಡಳಿತ ಸಂಸ್ಥೆಗಳು ಹಾಗೂ ಪೊಲೀಸರು ಜಾಗೃತರಾಗಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಕೇರಳ ಹೊಸ ಮಾದರಿಯನ್ನು ಸಿದ್ಧಪಡಿಸುತ್ತಿದೆ. ಇದುವರೆಗೆ 5 ಕೋಟಿ ವೆಚ್ಚದಲ್ಲಿ 126 ಶಾಲಾ ಕಟ್ಟಡಗಳು ಹಾಗೂ 3 ಕೋಟಿ ರೂ.ವೆಚ್ಚದಲ್ಲಿ 153 ಶಾಲಾ ಕಟ್ಟಡಗಳನ್ನು ಏIಈಃ ನಿಧಿ ಬಳಸಿ ಪೂರ್ಣಗೊಳಿಸಲಾಗಿದೆ. ಇದಲ್ಲದೇ 97 ಹೊಸ ಕಟ್ಟಡಗಳು ಪೂರ್ಣಗೊಳ್ಳುತ್ತಿವೆ.