HEALTH TIPS

ಜಲ್ಲಿಕಟ್ಟು ತೀರ್ಪು: ನ್ಯಾಯಪೀಠ ಹೇಳಿದ್ದೇನು?

                 ವದೆಹಲಿ: ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ ತಮಿಳುನಾಡು, ಮಹಾರಾಷ್ಟ್ರ ಹಾಗೂ ಕರ್ನಾಟಕ ಸರ್ಕಾರಗಳು ತಂದಿರುವ ತಿದ್ದುಪಡಿಯ ಸಿಂಧುತ್ವವನ್ನು ಸುಪ್ರೀಂಕೋರ್ಟ್‌ ಗುರುವಾರ ಎತ್ತಿ ಹಿಡಿದಿದೆ. ಕ್ರಮವಾಗಿ, ಈ ರಾಜ್ಯಗಳಲ್ಲಿ ಆಚರಿಸಲಾಗುವ ಜಲ್ಲಿಕಟ್ಟು, ಎತ್ತಿನ ಗಾಡಿಗಳ ಓಟ ಹಾಗೂ ಕಂಬಳ ಸ್ಪರ್ಧೆಗಳಿಗೆ ಸುಪ್ರೀಂಕೋರ್ಟ್‌ ಅನುಮತಿ ನೀಡಿದಂತಾಗಿದೆ.

              ನ್ಯಾಯಮೂರ್ತಿ ಕೆ.ಎಂ.ಜೋಸೆಫ್‌ ನೇತೃತ್ವದ ಐವರು ಸದಸ್ಯರಿದ್ದ ಸಂವಿಧಾನ ಪೀಠ ಸರ್ವಾನುಮತದ ತೀರ್ಪು ಪ್ರಕಟಿಸಿದೆ. ನ್ಯಾಯಮೂರ್ತಿಗಳಾದ ಅಜಯ್‌ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್‌ ಹಾಗೂ ಸಿ.ಟಿ.ರವಿಕುಮಾರ್‌ ಈ ಪೀಠದಲ್ಲಿದ್ದರು.

               ಈ ಕಾಯ್ದೆಗೆ ತಂದ ತಿದ್ದುಪಡಿಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠ ನಡೆಸಿತ್ತು. ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಉದ್ಭವಿಸಿದ್ದ ಐದು ಪ್ರಶ್ನೆಗಳನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಿ ದ್ವಿಸದಸ್ಯ ಪೀಠವು 2018ರಲ್ಲಿ ಆದೇಶಿಸಿತ್ತು. ವಿಚಾರಣೆ ಪೂರ್ಣಗೊಳಿಸಿದ್ದ ಸಂವಿಧಾನ ಪೀಠ ಕಳೆದ ವರ್ಷ ಡಿಸೆಂಬರ್ 8ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

                                                      ನ್ಯಾಯಪೀಠ ಹೇಳಿದ್ದೇನು?

             'ಈ ಕಾಯ್ದೆಗೆ ತಮಿಳುನಾಡು ಸರ್ಕಾರ ತಂದಿರುವ ತಿದ್ದುಪಡಿಗಳಿಗೆ ಸಂಬಂಧಿಸಿ ನಾವು ನೀಡಿರುವ ತೀರ್ಪು, ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳು ತಂದಿರುವ ತಿದ್ದುಪಡಿ ಕಾಯ್ದೆಗಳಿಗೂ ಅನ್ವಯಿಸುತ್ತದೆ. ಈ ಎಲ್ಲ ತಿದ್ದುಪಡಿ ಕಾಯ್ದೆಗಳು ಸಿಂಧುವಾಗಿವೆ' ಎಂದು ನ್ಯಾಯಪೀಠ ಹೇಳಿತು.

            'ಈ ತಿದ್ದುಪಡಿ ಕಾಯ್ದೆಗಳಡಿ ರೂಪಿಸಲಾಗಿರುವ ನಿಯಮಗಳನ್ನು ಹಾಗೂ ಹೊರಡಿಸಿರುವ ಅಧಿಸೂಚನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಈ ನಿಯಮಗಳು/ಅಧಿಸೂಚನೆಗಳನ್ನು ಜಾರಿಗೊಳಿಸುವ ಹೊಣೆಗಾರಿಕೆ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳದ್ದು' ಎಂದು ನ್ಯಾಯಮೂರ್ತಿ ಅನಿರುದ್ಧ ಬೋಸ್‌ ಹೇಳಿದರು.

                 'ತಮಿಳುನಾಡಿನ ತಿದ್ದುಪಡಿ ಕಾಯ್ದೆಯು ಸಂವಿಧಾನದ 7ನೇ ಶೆಡ್ಯೂಲ್‌ನ 3ನೇ ಪಟ್ಟಿಯ 17ನೇ ಅಂಶದಲ್ಲಿ ಅಡಕವಾಗಿರುವ ಆಶಯಕ್ಕೆ ಸಂಬಂಧಿಸಿದ್ದಾಗಿದೆ. ಸಂಬಂಧಪಟ್ಟ ಕ್ರೀಡೆಗಳಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ಕಡಿಮೆಗೊಳಿಸುವ ಆಶಯವನ್ನು ಈ ತಿದ್ದುಪಡಿಗಳು ಒಳಗೊಂಡಿವೆ' ಎಂದೂ ನ್ಯಾಯಪೀಠ ಹೇಳಿತು.

                  'ಜಲ್ಲಿಕಟ್ಟು ಕ್ರೀಡೆಯು ಕೆಲ ಶತಮಾನಗಳಿಂದಲೂ ತಮಿಳುನಾಡಿನಲ್ಲಿ ಆಚರಣೆಯಲ್ಲಿದೆ. ಇದು ತಮಿಳು ಸಂಸ್ಕೃತಿಯ ಅವಿಭಾಗ್ಯ ಅಂಗವೇ ಅಥವಾ ಅಲ್ಲವೇ ಎಂಬುದನ್ನು ನಿರ್ಣಯಿಸಲು ಈ ಕ್ರೀಡೆಗೆ ಸಂಬಂಧಿಸಿದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಂಶಗಳ ವಿಸ್ತೃತ ವಿಶ್ಲೇಷಣೆಯ ಅಗತ್ಯ ಇದೆ. ಈ ಕಾರ್ಯವನ್ನು ನ್ಯಾಯಾಂಗ ಕೈಗೊಳ್ಳುವುದಿಲ್ಲ' ಎಂದು ಸ್ಪಷ್ಟಪಡಿಸಿತು.

'ಒಂದು ರಾಜ್ಯದ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮಾಡುವ ಉದ್ದೇಶದಿಂದ ತಮಿಳುನಾಡು ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ತಂದಿದೆ ಎಂಬ ವಿಷಯವೂ ಚರ್ಚಾಸ್ಪದ. ಇದನ್ನು ಜನರೇ ನಿರ್ಣಯಿಸಬೇಕು. ಈ ತಿದ್ದುಪಡಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿರುವುದರಿಂದ ರಾಜ್ಯ ಸರ್ಕಾರದ ಕ್ರಮದಲ್ಲಿ ಏನಾದರೂ ನ್ಯೂನತೆ ಇರುತ್ತದೆ ಎಂದು ನಾವು ಭಾವಿಸುವುದಿಲ್ಲ' ಎಂದು ನ್ಯಾಯಮೂರ್ತಿಗಳು ಹೇಳಿದರು.

               'ಜಲ್ಲಿಕಟ್ಟು' ಕ್ರೀಡೆ ಕುರಿತು 2014ರಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌, 'ಜಲ್ಲಿಕಟ್ಟು ಅಥವಾ ಗಾಡಿ ಓಡಿಸುವ ಸ್ಪರ್ಧೆಗಳಲ್ಲಿ ಎತ್ತುಗಳ ಬಳಕೆ ಮಾಡಬಾರದು' ಎಂದು ಹೇಳಿತ್ತು. ಇಂಥ ಕ್ರೀಡೆಗಳಲ್ಲಿ ಎತ್ತುಗಳನ್ನು ಬಳಸುವುದನ್ನು ದೇಶದಾದ್ಯಂತ ನಿಷೇಧಿಸಿತ್ತು.

ಪೊಂಗಲ್‌ ವೇಳೆ ಜಲ್ಲಿಕಟ್ಟು ಆಯೋಜನೆ

ತಮಿಳುನಾಡಿನಲ್ಲಿ ಸುಗ್ಗಿಯ ಹಬ್ಬವಾಧ ಪೊಂಗಲ್‌ ವೇಳೆ, ಎತ್ತುಗಳನ್ನು ಪಳಗಿಸುವ 'ಜಲ್ಲಿಕಟ್ಟು' ಕ್ರೀಡೆಯನ್ನು ಆಯೋಜಿಸಲಾಗುತ್ತದೆ.

                                                   ಕೋಣಗಳೇ ಕಂಬಳದ ಆಕರ್ಷಣೆ

               ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗಗಳಲ್ಲಿ 'ಕಂಬಳ' ಕ್ರೀಡೆಯನ್ನು ನವೆಂಬರ್‌ ಹಾಗೂ ಮಾರ್ಚ್‌ ನಡುವೆ ಆಯೋಜಿಸಲಾಗುತ್ತದೆ. ಕಂಬಳದಲ್ಲಿ ಕೋಣಗಳೇ ಪ್ರಮುಖ ಆಕರ್ಷಣೆ. ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ನಿರ್ದಿಷ್ಟ ಮಟ್ಟಕ್ಕೆ ನೀರನ್ನು ತುಂಬಿ ಅದರಲ್ಲಿ ಬಲಿಷ್ಠ ಕೋಣಗಳನ್ನು ಓಡಿಸಲಾಗುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries