ನವದೆಹಲಿ: ವಾರಣಾಸಿಯ ಜ್ಞಾನವಾಪಿ ಮಸೀದಿಯೊಳಗೆ ಪೂಜೆ ಸಲ್ಲಿಸುವ ಹಕ್ಕನ್ನು ಕೋರಿ ಹಿಂದೂ ಮಹಿಳಾ ಆರಾಧಕರು ಸಲ್ಲಿಸಿರುವ ಸಿವಿಲ್ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಮುಸ್ಲಿಂ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಇಂದು (ಬುಧವಾರ) ವಜಾಗೊಳಿಸಿದೆ.
ನ್ಯಾಯಾಲಯದ ತೀರ್ಪು ಸ್ಥಳೀಯ ವಾರಣಾಸಿ ನ್ಯಾಯಾಲಯದಲ್ಲಿ ಪ್ರಕರಣವನ್ನು ಮುಂದುವರಿಸಲು ಅವಕಾಶ ನೀಡುತ್ತದೆ. ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಪ್ರಕರಣವನ್ನು ವಜಾಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ವಾರಣಾಸಿಯ ಜಿಲ್ಲಾ ನ್ಯಾಯಾಧೀಶರ ತೀರ್ಪಿನ ವಿರುದ್ಧ ಸಲ್ಲಿಸಿದ ಮೇಲ್ಮನವಿ ಇದಾಗಿದೆ.
ಇದು ಹಿಂದೂಗಳ ಪಾಲಿಗೆ ದೊಡ್ಡ ಗೆಲುವು. ಜ್ಞಾನವಾಪಿ ಮಸೀದಿಯೊಳಗೆ ಪೂಜಿಸುವ ಹಕ್ಕನ್ನು ಕೋರಿ ಐವರು ಹಿಂದೂ ಮಹಿಳಾ ಆರಾಧಕರ ಮೊಕದ್ದಮೆಯ ನಿರ್ವಹಣೆಯನ್ನು ಪ್ರಶ್ನಿಸಿ ಅಂಜುಮನ್ ಇಂತಾಜಾಮಿಯಾ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ನ್ಯಾಯಾಲಯದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ಹಿಂದೂ ಪರ ವಕೀಲ ಸುಭಾಷ್ ನಂದನ್ ಚತುರ್ವೇದಿ ತಿಳಿಸಿದ್ದಾರೆ.
ಇದೊಂದು ಐತಿಹಾಸಿಕ ತೀರ್ಪು. ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ಅರ್ಜಿಯನ್ನು ನಿರ್ವಹಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ ಎಂದು ಮತ್ತೊಬ್ಬ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.
ಜ್ಞಾನವ್ಯಾಪಿ ಮಸೀದಿ ಸರ್ವೆ: ಆಕ್ಷೇಪಣಾ ಅರ್ಜಿ ಸಲ್ಲಿಕೆ
: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಇಲ್ಲಿನ ಕಾಶಿ ದೇಗುಲದ ಸಂಕೀರ್ಣದಲ್ಲಿ ಇರುವ ಜ್ಞಾನವಾಪಿ ಮಸೀದಿಯ ಸಂಪೂರ್ಣ ಸರ್ವೆ ನಡೆಸುವುದಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆಗೂ ಮುನ್ನವೇ ಮಸೀದಿ ಆಡಳಿತ ಮಂಡಳಿಯು ಆಕ್ಷೇಪಣಾ ಅರ್ಜಿ ಸಲ್ಲಿಸಿದೆ.
ಹೈಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಮಸೀದಿಯ ಭೂ ವಿಸ್ತೀರ್ಣವನ್ನು ಸರ್ವೆಗೆ ಒಳಪಡಿಸಬೇಕು ಎಂದು ಮೇ 16ರಂದು ಸಲ್ಲಿಸಿರುವ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿತ್ತು.
'ಮಸೀದಿ ಕಮಿಟಿಯು ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ವಿಚಾರಣೆಯನ್ನು ಜುಲೈ 7ಕ್ಕೆ ಮುಂದೂಡಿದೆ' ಎಂದು ಜ್ಞಾನವ್ಯಾಪಿ ಮತ್ತು ಆದಿವಿಶ್ವೇಶ್ವರ ಪ್ರಕರಣಗಳ ಪರ ವಿಶೇಷ ವಕೀಲ ರಾಜೇಶ್ ಮಿಶ್ರಾ ತಿಳಿಸಿದ್ದಾರೆ.
ಶಿವಲಿಂಗ ರೂಪದ ರಚನೆಯ ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶದ ಅನುಷ್ಠಾನವನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ.