ಕೊಚ್ಚಿ: ಐಫೋನ್ ಉಡುಗೊರೆ ಕೊಡಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಪ್ರೇಯಸಿ, ತನ್ನ ಪ್ರಿಯಕರನ ಆಪ್ತ ಸ್ನೇಹಿತನ ಐಫೋನ್ ಅನ್ನೇ ಕಳ್ಳತನ ಮಾಡಿರುವ ವಿಚಿತ್ರ ಪ್ರಕರಣ ಕೇರಳದ ಥ್ರಿಕ್ಕಾಕ್ಕರದಲ್ಲಿ ನಡೆದಿದೆ.
ಐಫೋನ್ ಕದ್ದ ಯುವತಿ ಕಾಕ್ಕನಾಡಿನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ.
ಸ್ನೇಹಿತನ ಗೆಳತಿ ತನ್ನ ಐಫೋನ್ ಕದ್ದಿದ್ದಾಳೆ ಎಂದು ಆರೋಪಿಸಿ ಸಂತ್ರಸ್ತ ಯುವಕ ನೀಡಿದ ದೂರಿನ ಮೇರೆಗೆ ಇನ್ಫೋಪಾರ್ಕ್ ಪೊಲೀಸರು ತನಿಖೆ ನಡೆಸಿದ ನಂತರ ಘಟನೆ ಬೆಳಕಿಗೆ ಬಂದಿದೆ.
3 ಕೋಟಿ ಪ್ಯಾಕೇಜ್ ಗಿಟ್ಟಿಸಿದ ಎಲ್‌ಪಿಯು ಪದವೀಧರ!
ಫೋನ್ ಸಮೇತ ಹಾಸ್ಟೆಲ್‌ಗೆ ಪರಾರಿ
ಸಂತ್ರಸ್ತ ಯುವಕ ತನ್ನ ಸ್ನೇಹಿತನ ಸೂಚನೆಯ ಮೇರೆಗೆ ಎರ್ನಾಕುಲಂ ಸೌತ್ ರೈಲ್ವೆ ನಿಲ್ದಾಣದಿಂದ ಕಾಕ್ಕನಾಡ್‌ನಲ್ಲಿರುವ ಹುಡುಗಿಯರ ಹಾಸ್ಟೆಲ್‌ಗೆ ಸ್ನೇಹಿತನ ಗೆಳತಿಯನ್ನು ಕರೆದೊಯ್ದ ಬಳಿಕ ಈ ಘಟನೆ ನಡೆದಿದೆ. ಹಾಸ್ಟೆಲ್ ತಲುಪಿದ ಯುವತಿ, ತನ್ನ ಪ್ರಿಯಕರನಿಗೆ ಕರೆ ಮಾಡಲು ಸಂತ್ರಸ್ತ ಯುವಕನ ಬಳಿಕ ಐಫೋನ್ ಕೇಳಿದ್ದಾಳೆ. ಯುವಕನೂ ಮೊಬೈಲ್ ನೀಡಿದ್ದಾನೆ. ಬಳಿಕ ಸಂಖ್ಯೆಯನ್ನು ಡಯಲ್ ಮಾಡಿದ ನಂತರ, ಯುವತಿ ಇದ್ದಕ್ಕಿದ್ದಂತೆ ಫೋನ್ ಸಮೇತ ಹಾಸ್ಟೆಲ್‌ಗೆ ಓಡಿಹೋಗಿದ್ದಾಳೆ. ಇತ್ತ ಸಂತ್ರಸ್ತ ಯುವಕ ಸ್ವಲ್ಪ ಸಮಯವರೆಗೆ ಕಾದಿದ್ದಾನೆ. ಬಳಿಕ ಮೊಬೈಲ್ ಬಗ್ಗೆ ಮಹಿಳಾ ಹಾಸ್ಟೆಲ್‌ನ ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿದ್ದಾನೆ. ಆದರೆ, ಯುವಕನನ್ನು ನಂಬಲು ಭದ್ರತಾ ಸಿಬ್ಬಂದಿ ಸಿದ್ಧರಿರಲಿಲ್ಲ. ಈ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದೆ ಯುವಕ ಪೊಲೀಸರ ಮೊರೆ ಹೋದನು.
ಭಯದಿಂದ ಫೋನ್ ಎಸೆತ
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿಯನ್ನು ವಿಚಾರಣೆ ನಡೆಸಿದಾಗ, ಯುವತಿ ತಾನು ಯುವಕನ ಐಫೋನ್ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾಳೆ. ಸಾಕಷ್ಟು ವಿಚಾರಣೆಯ ಬಳಿಕ ಕೊನೆಗೂ ಸತ್ಯ ಒಪ್ಪಿಕೊಂಡ ಯುವತಿ ಫೋನ್ ಅನ್ನು ಹತ್ತಿರದ ಅರಣ್ಯಕ್ಕೆ ಎಸೆದಿರುವುದಾಗಿ ಹೇಳಿದಳು. ಫೋನ್ ಹಿಂತಿರುಗಿಸಿದರೆ ಕಳ್ಳತನ ಪ್ರಕರಣದಲ್ಲಿ ಆರೋಪಿ ಎಂದು ನಿನ್ನನ್ನು ಹೆಸರಿಸುತ್ತಾರೆ ಎಂದು ಸ್ನೇಹಿತೆಯೊಬ್ಬಳು ಹೇಳಿದ್ದಕ್ಕೆ ಭಯದಿಂದ ಫೋನ್ ಎಸೆದಿದ್ದೇನೆ ಎಂದು ಯುವತಿ ಹೇಳಿದಳು.
ಸಮೀಪದ ಅರಣ್ಯದಲ್ಲಿ ಹುಡುಕಾಟ ನಡೆಸಿದರೂ ಫೋನ್ ಮಾತ್ರ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಬುಧವಾರ ಯುವತಿಯ ಪೋಷಕರನ್ನು ಠಾಣೆಗೆ ಕರೆಸಿದ್ದರು. ಫೋನ್ನ ವೆಚ್ಚವನ್ನು 15 ದಿನಗಳೊಳಗೆ ಯುವಕನಿಗೆ ಹಸ್ತಾಂತರಿಸಬೇಕೆಂಬ ಷರತ್ತಿನ ಮೇಲೆ ಪ್ರಕರಣವನ್ನು ಇತ್ಯರ್ಥ ಮಾಡಲಾಯಿತು.