ಹೈದರಾಬಾದ್ : ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ನಿರ್ಮಿಸಲಾಗಿರುವ ನೂತನ ಸಚಿವಾಲಯ ಕಟ್ಟಡ 'ಡಾ.ಬಿ.ಆರ್.ಅಂಬೇಡ್ಕರ್ ತೆಲಂಗಾಣ ಸಚಿವಾಲಯ ಭವನ'ವನ್ನು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಭಾನುವಾರ ಇಲ್ಲಿ ಉದ್ಘಾಟಿಸಿದರು.
ಹೈದರಾಬಾದ್ : ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ನಿರ್ಮಿಸಲಾಗಿರುವ ನೂತನ ಸಚಿವಾಲಯ ಕಟ್ಟಡ 'ಡಾ.ಬಿ.ಆರ್.ಅಂಬೇಡ್ಕರ್ ತೆಲಂಗಾಣ ಸಚಿವಾಲಯ ಭವನ'ವನ್ನು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಭಾನುವಾರ ಇಲ್ಲಿ ಉದ್ಘಾಟಿಸಿದರು.
265 ಅಡಿ ಎತ್ತರದ ಈ ಕಟ್ಟಡದ ನಿರ್ಮಾಣ ವಲಯದ ವಿಸ್ತೀರ್ಣ 10,51,676 ಚದರ ಅಡಿಗಳಾಗಿದೆ. ಸಚಿವಾಲಯ ಕಟ್ಟಡ ಒಳಗೊಂಡಿರುವ ಭೂಮಿಯು ಒಟ್ಟು ವಿಸ್ತೀರ್ಣ 28 ಎಕರೆಗಳಾಗಿದೆ.
'2019ರ ಜೂನ್ 27ರಲ್ಲಿ ಭೂಮಿಪೂಜೆ ಆಗಿದ್ದರೂ, 2021ರ ಜನವರಿ ತಿಂಗಳಲ್ಲಿ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ದೇಶದಲ್ಲಿಯೇ ಅತಿ ಎತ್ತರದ ಸಚಿವಾಲಯ ಕಟ್ಟಡ ಇದಾಗಿದೆ. ನಿಜಾಮಾಬಾದ್‌ನ ಕಾಕತೀಯ ಆಡಳಿತಾವಧಿಯ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದ ಗೋಪುರವನ್ನು ಹೋಲುವಂತೆ ಕಟ್ಟಡದ ಗೋಪುರಗಳನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ತೆಲಂಗಾಣದ ವಾನಪಾರ್ತಿ ಸಂಸ್ಥಾನಂ ರಾಜಮನೆತನದ ಅರಮನೆ, ಗುಜರಾತ್‌ನ ಸಾರಂಗಪುರದ ಹನುಮಾನ್ ದೇಗುಲದ ವಿನ್ಯಾಸವನ್ನೂ ಆಧರಿಸಿದ್ದಾಗಿದೆ' ಎಂದು ತೆಲಂಗಾಣ ಸರ್ಕಾರವು ಈ ಕುರಿತ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ಭಾರತೀಯ ಹಸಿರು ಕಟ್ಟಡ ಮಂಡಳಿ (ಐಜಿಬಿಸಿ), ತೆಲಂಗಾಣದ ರಸ್ತೆ, ಕಟ್ಟಡ ಇಲಾಖೆ, ತಂತ್ರಜ್ಞಾನ ಸೇವಾ ಇಲಾಖೆ, ಪೊಲೀಸ್ ಇಲಾಖೆಯ ಸಲಹೆಗಳನ್ನು ಆಧರಿಸಿ ಕಟ್ಟಡ ನಿರ್ಮಾಣ ಕಾರ್ಯ ನಡೆದಿದೆ.
ಸಚಿವಾಲಯ ಕಟ್ಟಡ ಉದ್ಘಾಟಿಸಿದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರು, 'ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ಸಾಕಾರಗೊಳಿಸಲು ಸರ್ಕಾರ ಕಾರ್ಯ ನಿರ್ವಹಿಸಬೇಕು' ಎಂದು ಅಭಿಪ್ರಾಯಪಟ್ಟರು. ಉದ್ಘಾಟನೆಯ ನಿಮಿತ್ತ 'ಸುದರ್ಶನ ಯಜ್ಞ'ವನ್ನು ಆಯೋಜಿಸಲಾಗಿತ್ತು.
'ಜನಪ್ರತಿನಿಧಿಗಳು, ಸರ್ಕಾರಿ ನೌಕರರು ಇದನ್ನು ಅರ್ಥೈಸಿಕೊಂಡು ಕೆಲಸ ಮಾಡಬೇಕು ಎಂಬ ಉದ್ದೇಶದಿಂದಲೇ ಸಚಿವಾಲಯ ಕಟ್ಟಡಕ್ಕೆ ಡಾ. ಅಂಬೇಡ್ಕರ್ ಹೆಸರಿಡಲಾಗಿದೆ. ಡಾ. ಅಂಬೇಡ್ಕರ್ ಚಿಂತನೆ ಮತ್ತು ಗಾಂಧಿ ಮಾರ್ಗದಲ್ಲಿ ತೆಲಂಗಾಣ ರಾಜ್ಯ ಮುನ್ನಡೆಯಲಿ' ಎಂದು ಅವರು ಆಶಿಸಿದರು.