ನವದೆಹಲಿ:ಭಾರತದಲ್ಲಿನ ಅರ್ಧಕ್ಕೂ ಹೆಚ್ಚು ಅಂತರ್ಜಾಲ ಬಳಕೆದಾರರು ಸುದ್ದಿಯನ್ನು ಆನ್‌ಲೈನ್ ಮೂಲಕ ಓದುತ್ತಾರೆ ಮತ್ತು ಅವರ ಪೈಕಿ ಸುಮಾರು ಅರ್ಧದಷ್ಟು ಮಂದಿ ಸುದ್ದಿಯನ್ನು ಓದಲು ವಿಶ್ವಾಸಾರ್ಹತೆಯನ್ನು ಮಾನದಂಡವಾಗಿ ಬಳಸುತ್ತಾರೆ ಎಂಬ ಸಂಗತಿ ಗುರುವಾರ ಬಿಡುಗಡೆಯಾಗಿರುವ ಕ್ಯಾಂಟರ್-ಗೂಗಲ್ ವರದಿಯಲ್ಲಿ ಬಹಿರಂಗಗೊಂಡಿದೆ.
ನಗರ ಭಾರತದ ಶೇ. 37ರಷ್ಟು ಅಂತರ್ಜಾಲ ಬಳಕೆದಾರರಿಗೆ ಹೋಲಿಸಿದರೆ ಗ್ರಾಮೀಣ ಭಾರತದಲ್ಲೇ ಗರಿಷ್ಠ ಪ್ರಮಾಣದ ಸುದ್ದಿ ವಾಚನದ ಆಸಕ್ತಿ (ಶೇ. 63 ಅಥವಾ 23.8 ಕೋಟಿ) ಕಂಡು ಬಂದಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.
ವರದಿಯ ಪ್ರಕಾರ, ಶೇ. 52 ಮಂದಿ ಅಥವಾ 37.9 ಕೋಟಿ ಅಂತರ್ಜಾಲ ಬಳಕೆದಾರರು ಭಾರತೀಯ ಭಾಷೆಗಳಲ್ಲಿ ಸುದ್ದಿ ತಂತ್ರಾಂಶ/ಅಂತರ್ಜಾಲ ತಾಣ, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು, ಸಂದೇಶದ ಹಂಚುವಿಕೆ, ಯೂಟ್ಯೂಬ್ ಇತ್ಯಾದಿ ಮೂಲಕ ಆನ್‌ಲೈನ್ ಸುದ್ದಿಗಳನ್ನು ಓದುತ್ತಾರೆ.
"ಸಾಂಪ್ರದಾಯಿಕ ಟಿವಿ ವಾಹಿನಿಗಳಿಗಿಂತ ಆನ್‌ಲೈನ್ ವೀಕ್ಷಣೆಯೇ ಜನಸಾಮಾನ್ಯರ ನಡುವೆ ಹೆಚ್ಚು ಜನಪ್ರಿಯವಾಗಿದೆ ಎಂದು ಶೇ. 48 ಮಂದಿ ಅಂತರ್ಜಾಲ ಬಳಕೆದಾರರು ಅಭಿಪ್ರಾಯ ಪಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಭಾರತದಲ್ಲಿ 72.9 ಕೋಟಿ ಅಂತರ್ಜಾಲ ಬಳಕೆದಾರರಿದ್ದಾರೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ. ಆನ್‌ಲೈನ್‌ನ ಹೊಸ ಗ್ರಾಹಕರು ವಿಡಿಯೊ ಮಾದರಿಯ ಸುದ್ದಿಯನ್ನು ಹೆಚ್ಚು ಪರಿಗಣಿಸುತ್ತಿದ್ದು, ನಂತರದ ಸ್ಥಾನದಲ್ಲಿ ಲಿಖಿತ ಹಾಗೂ ಶ್ರಾವ್ಯ ಮಾದರಿಯ ಸುದ್ದಿಗಳಿವೆ.