ಇಂಫಾಲ: ಪರಿಶಿಷ್ಟ ಪಂಗಡದ ಸ್ಥಾನಮಾನದ ಕುರಿತು ನ್ಯಾಯಾಲಯದ ಆದೇಶದ ವಿರುದ್ಧ ಬುಡಕಟ್ಟು ಗುಂಪುಗಳು ಮಣಿಪುರದಲ್ಲಿ ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈ ಹಿನ್ನೆಲೆಯಲ್ಲಿ ಹಿಂಸಾಚಾರ ಹತ್ತಿಕ್ಕಲು ಸೇನೆ ಮತ್ತು ಅಸ್ಸಾಂ ರೈಫಲ್ಸ್ಗೆ ಬುಲಾವ್ ನೀಡಲಾಗಿದೆ.
ಇಂಫಾಲ್, ಚುರಾಚಂದ್ಪುರ ಹಾಗೂ ಕಾಂಗ್ಪೋಕ್ಪಿಯಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ನಿನ್ನೆ ರಾತ್ರಿ ಮಣಿಪುರದ ಎಂಟು ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಮಣಿಪುರ ಸರಕಾರ ರಾಜ್ಯದಲ್ಲಿ 5 ದಿನಗಳ ಕಾಲ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ. ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಸೇನೆ ಹಾಗೂ ಅಸ್ಸಾಂ ರೈಫಲ್ಸ್ನಿಂದ ಇಂದು ಧ್ವಜ ಮೆರವಣಿಗೆ ನಡೆಸಲಾಯಿತು. ಹಿಂಸಾಚಾರದ ನಂತರ ರಾಜ್ಯದ ವಿವಿಧ ಹಿಂಸಾಪೀಡಿತ ಪ್ರದೇಶಗಳಲ್ಲಿನ ಸುಮಾರು 4,000 ಜನರಿಗೆ ಸೇನಾ ಶಿಬಿರಗಳು ಹಾಗೂ ಸರಕಾರಿ ಕಚೇರಿ ಆವರಣದಲ್ಲಿ ಆಶ್ರಯ ನೀಡಲಾಯಿತು.
ಮೇಟಿ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್ಟಿ) ವರ್ಗಕ್ಕೆ ಸೇರಿಸಬೇಕೆಂಬ ತಮ್ಮ ಬೇಡಿಕೆಯನ್ನು ಪ್ರತಿಭಟಿಸಲು ವಿದ್ಯಾರ್ಥಿಗಳ ಸಂಘಟನೆಯು ಕರೆ ನೀಡಿದ್ದ ‘ಬುಡಕಟ್ಟು ಏಕತಾ ಮೆರವಣಿಗೆ’ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಮೇಟಿ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸಬೇಕೆಂಬ ಬೇಡಿಕೆ ತೀವ್ರಗೊಳ್ಳುತ್ತಿದ್ದು, ಇದರ ವಿರುದ್ಧ ಮೆರವಣಿಗೆಗೆ ಕರೆ ನೀಡಿರುವುದಾಗಿ ತಿಳಿಸಿದರು. ರ್ಯಾಲಿಯಲ್ಲಿ ಸಾವಿರಾರು ಆಂದೋಲನಕಾರರು ಭಾಗವಹಿಸಿದ್ದರು ಮತ್ತು ಟೋರ್ಬಂಗ್ ಪ್ರದೇಶದಲ್ಲಿ ಬುಡಕಟ್ಟು ಮತ್ತು ಬುಡಕಟ್ಟು ಅಲ್ಲದವರ ನಡುವೆ ಹಿಂಸಾಚಾರ ವರದಿಯಾಗಿದೆ.