ಕೋಪ ಮನುಷ್ಯನ ಸಹಜ ಗುಣ. ಅದ್ರಲ್ಲೂ ಮಕ್ಕಳು ಬಹುಬೇಗ ಕೋಪಿಸಿಕೊಳ್ಳುತ್ತಾರೆ. ಕೋಪ ಬಂದಾಗ ಅಳೋದು, ಕಿರುಚಾಡೋದು ಮಕ್ಕಳ ಸಾಮಾನ್ಯ ಗುಣ. ಕೆಲವೊಂದು ಸಲ ಮಕ್ಕಳು ಕೋಪ ಬಂದಾಗಂತೂ ತಮ್ಮ ದೇಹಕ್ಕೆ ಹಾನಿಯುಂಟು ಮಾಡಿಕೊಳ್ಳುತ್ತಾರೆ. ಮಕ್ಕಳ ಕೋಪ ತಣ್ಣಗಾಗಿಸೋದು ಅಂದ್ರೆ ಸುಲಭದ ಮಾತಲ್ಲ. ಅಷ್ಟಕ್ಕು ನಿಮ್ಮ ಮಗುವಿನ ಕೋಪವನ್ನು ನಿಯತ್ರಿಸೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್.
1. ಬ್ರೇಕ್ ತೆಗೆದುಕೊಳ್ಳಲು ಹೇಳಿ
ನಿಮ್ಮ ಮಗು ಕೋಪಿಸಿಕೊಂಡಾಗ ಅವರ ಗುಣ ಆಕ್ರಮಣಕಾರಿ ಹಾಗೂ ಹಿಂಸಾತ್ಮಕವಾಗಿ ಬದಲಾಗಬಹುದು. ಮೊದಲು ಅದನ್ನು ನಿಲ್ಲಿಸಿ. ಅವರ ಕೋಪ ಕರಗುವ ತನಕ ಅವರನ್ನು ಶಾಂತವಾಗಿ ಕುಳಿತುಕೊಳ್ಳೋದಕ್ಕೆ ಹೇಳಿ. ಸರಿಯಾಗಿ ಉಸಿರಾಟ ಮಾಡಲು ಹೇಳಿ. ಅಷ್ಟರಲ್ಲಿ ಕೊಂಚ ಮಟ್ಟಿಗೆ ಅವರ ಕೋಪ ಕರಗಿರುತ್ತದೆ. ನಂತರ ಅವರಿಗೆ ಕೋಣೆಗೆ ಹೋಗಿ ವಿರಾಮ ತೆಗೆದುಕೊಳ್ಳೋದಕ್ಕೆ ಹೇಳಿ.
2. ಕೋಪವನ್ನು ಬೇರೆಡೆಗೆ ತಿರುಗಿಸಿ
ಕೋಪ ಬಂದಾಗ ಮಕ್ಕಳು ಚೀರಾಡುತ್ತಾರೆ, ತಮ್ಮ ಒಡಹುಟ್ಟಿದವರಿಗೆ ಹೊಡೆಯೋದು, ಬೈಯೋದು ಸಾಮಾನ್ಯ. ಕೋಪ ಬಂದಾಗ ಆ ಕೋಪವನ್ನು ನಿಯಂತ್ರಿಸಿಕೊಳ್ಳೋದು ಹೇಗೆ ಅನ್ನೋದನ್ನು ಚಿಕ್ಕಂದಿನಲ್ಲೇ ಕಲಿಸಿ ಕೊಡಿ. ಕೋಪ ಬಂದಾಗ ಪಂಚಿಂಗ್ ಬ್ಯಾಕ್ ಅಥವಾ ತಲೆದಿಂಬಿಗೆ ಹೊಡೆಯಲು ಹೇಳಿ. ಇದು ಕೋಪ ಕಡಿಮೆಗೊಳಿಸಲು ಸಹಾಯ ಮಾಡುತ್ತದೆ.
3. ಕರುಣೆ ತೋರಿಸಿ
ನಿಮ್ಮ ಮಗು ಕೋಪಗೊಂಡಾಗ ನೀವು ಅವರಿಗೆ ಬೈದು, ಹೊಡೆದು ಪ್ರತಿಕ್ರಿಯಿಸುವ ಬದಲು. ಅವರು ಯಾವ ಕಾರಣಕ್ಕಾಗಿ ಕೋಪಗೊಂಡಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಿ. ಆದಷ್ಟು ಸಮಾಧಾನದಿಂದ ಅವರನ್ನು ಮಾತನಾಡಿಸಿ. ಖಂಡಿತ ಅವರು ನಿಮ್ಮ ಸಾಂತ್ವಾನದ ಮಾತುಗಳಿಗೆ ಕರಗುತ್ತಾರೆ. ಹಾಗೂ ಅವರ ಕೋಪವು ತಣ್ಣಗಾಗುತ್ತದೆ.
4. ಕೋಪಗೊಂಡಾಗ ಏನು ಮಾಡಬಾರದು ಅನ್ನೋ ನಿಯಮ ರೂಪಿಸಿ
ಕೋಪ ಬಂದಾಗ ನಮ್ಮ ಪ್ರತಿಕ್ರಿಯೆ ಬೇರೆಯದ್ದೇ ಆಗಿರುತ್ತದೆ. ನಾವು ನಾವಾಗಿ ಇರೋದಿಲ್ಲ. ನಿಮ್ಮ ಮಕ್ಕಳಿಗೆ ಮೊದಲೇ ಷರತ್ತುಗಳನ್ನು ಹಾಕಿ. ಕೋಪಗೊಂಡಾಗ, ಹೊಡಿಯೋದು, ಬಡಿಯೋದು, ಕಿರುಚಾಡೋದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿ. ನಿಧಾನವಾಗಿ ಮಕ್ಕಳು ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ.
5. ದಿನಚರಿಯನ್ನು ಅಳವಡಿಸಿ
ಪ್ರತಿನಿತ್ಯ ಮನೆಯಲ್ಲಿ ಪೋಷಕರು 30 ನಿಮಿಷವನ್ನು ದೈಹಿಕ ಚಟುವಟಿಕೆಗಾಗಿ ಮೀಸಲಿಡೋದನ್ನು ಮರೆಯಬೇಡಿ. ಅದನ್ನು ನಿಮ್ಮ ಮಕ್ಕಳ ಜೊತೆಗೆ ಮಾಡಬೇಕು. ಅದೇ ರೀತಿ ಕೋಪ ನಿಯಂತ್ರಣಕ್ಕೆ ಬರಲು ಯೋಗ, ಧ್ಯಾನ ಮಾಡಿಸೋದು ಕೂಡ ಕಡ್ಡಾಯ. ಅಪ್ಪ ಅಥವಾ ಅಮ್ಮಾ ಪ್ರತಿನಿತ್ಯ ಈ ಚಟುವಟಿಕೆಗಳನ್ನು ಮಾಡಲೇಬೇಕು. ಆಗ ಖಂಡಿತ ಮಕ್ಕಳ ಕೋಪ ನಿಯಂತ್ರಣಕ್ಕೆ ಬರುತ್ತದೆ.
6. ಕೋಪ ಬಂದಾಗ ಮಕ್ಕಳನ್ನು ಅಪ್ಪಿಕೊಳ್ಳಿ
ಮಕ್ಕಳಿಗೆ ಕೋಪ ಬಂದಾಗ ಅವರನ್ನು ಅಪ್ಪಿಕೊಳ್ಳುವುದು ತುಂಬಾನೇ ಮುಖ್ಯ. ನೀವು ಏಕಾ ಏಕಿ ಮಗುವನ್ನು ಅಪ್ಪಿಕೊಂಡಾಗ ಅವರ ಕೋಪ ಅರ್ಧದಷ್ಟು ಕಡಿಮೆಯಾಗುತ್ತದೆ. ಆನಂತರ ನಿಧಾನವಾಗಿ ಕೋಪಕ್ಕೆ ಕಾರಣವನ್ನು ತಿಳಿದುಕೊಳ್ಳಿ. ಅದನ್ನು ಬಿಟ್ಟು ನೀವು ಮಕ್ಕಳ ಮೇಲೆ ಎಗರಾಡಿದರೆ ಏನು ಪ್ರಯೋಜನವಿಲ್ಲ.
7. ಕೋಪಗೊಳ್ಳೋದಕ್ಕೆ ಪ್ರಚೋದನೆ ಏನು ಎಂಬುದನ್ನು ಪತ್ತೆ ಹಚ್ಚಿ
ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ಅಂತಾರಲ್ಲ ಹಾಗೇ, ಮೊದಲಿಗೆ ಕೋಪ ಗೊಳ್ಳೋದಕ್ಕೆ ಪ್ರಚೋದನೆ ಏನು ಅನ್ನೋದನ್ನು ತಿಳಿದುಕೊಳ್ಳಿ. ಮುಂದಿನ ಸಾರಿ ಆ ಘಟನೆ ಮರುಕಳಿಸದಂತೆ ಜಾಗೃತೆ ವಹಿಸೋದು ಪೋಷಕರ ಕರ್ತವ್ಯ. ಒಂದು ವೇಳೆ ಅವರ ಒಡಹುಟ್ಟಿದವರ ಪ್ರಚೋದನೆಯಿಂದ ಕೋಪಗೊಳ್ಳುತ್ತಿದ್ದರೆ. ನಿಮ್ಮ ಮಕ್ಕಳಿಗೆ ತಿಳಿ ಹೇಳಿ.
8. ಬುದ್ಧಿವಾದ ಹೇಳಿ
ತುಂಬಾ ಚಿಕ್ಕವರಾದರೆ ನಾವು ಬುದ್ಧಿ ಹೇಳಿದರೂ ಅದನ್ನು ತಿಳಿದುಕೊಳ್ಳುವಷ್ಟು ಪ್ರಬುದ್ಧತೆ ಅವರಿಗೆ ಇರೋದಿಲ್ಲ. ದೊಡ್ಡವರಾದರೆ ನಾವು ತಿಳಿ ಹೇಳಿದರೆ ಖಂಡಿತ ಅರ್ಥ ಮಾಡಿಕೊಳ್ಳುತ್ತಾರೆ. ಅವರ ಜೊತೆ ಕೂತು ಸಮಾಧಾನವಾಗಿ ಮಾತನಾಡಿ ನೀವು ದೊಡ್ಡವರಾದ ಮೇಲೆ ನಿಮ್ಮ ಮಕ್ಕಳು ಈ ರೀತಿ ಮಾಡಿದರೆ ಏನು ಮಾಡುತ್ತೀರಿ ಎಂದು ಮರು ಪ್ರಶ್ನೆ ಮಾಡಿ. ಖಂಡಿತ ಅವರ ತಪ್ಪಿನ ಅರಿವು ಅವರಿಗೆ ಆಗುತ್ತದೆ.
ಕೋಪ ಮನುಷ್ಯನ ದೊಡ್ಡ ಶತ್ರು. ಕೋಪದಲ್ಲಿ ಒಂದ್ಸಾರಿ ಕುಯ್ದುಕೊಂಡ ಮೂಗು ಖಂಡಿತ ವಾಪಾಸ್ಸ್ ಆಗೋದಿಲ್ಲ. ಹೀಗಾಗಿ ನಿಮ್ಮ ಮಗುವಿಗೆ ವಿಪರೀತ ಕೋಪವಿದ್ದರೆ ಚಿಕ್ಕಂದಿನಲ್ಲೇ ಅದನ್ನು ತಣ್ಣಗಾಗಿಸೋ ಮಾರ್ಗ ಕಂಡುಕೊಳ್ಳಿ.