ನಮ್ಮಲ್ಲಿ ಫುಡ್ ಕ್ರೇಜ್ ಇರೋ ಅನೇಕ ಜನರು ಇದ್ದಾರೆ. ಫುಡ್ ಕ್ರೇಜ್ ಇರುವವರು ತರೆಹೇವಾರಿ ಆಹಾರಗಳನ್ನು ತಿನ್ನೋದಕ್ಕೆ ಇಷ್ಟ ಪಡುತ್ತಾರೆ. ಅದ್ರಲ್ಲೂ ಹೆಚ್ಚಿನ ಜನರಿಗೆ ಖಾರ ಖಾರವಾಗಿರೋ ಆಹಾರಗಳು ಅಂದ್ರೆ ತುಂಬಾನೇ ಇಷ್ಟ. ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಆದ್ರೆ ನಿಮಗೊತ್ತಾ? ಅತಿಯಾಗಿ ಖಾರ ಇರೋ ಸ್ಪೈಸಿ ಆಹಾರಗಳು ಆರೋಗ್ಯದ ದೃಷ್ಟಿಯಿಂದ ಬಹಳ ಕೆಟ್ಟದು.
ಅತಿಯಾಗಿ ಕೆಂಪು ಮೆಣಸಿನ ಪುಡಿ ಸೇರಿಸಿ ತಯಾರಿಸಿದ ಆಹಾರಗಳನ್ನು ಸೇವಿಸೋದ್ರಿಂದ ಮನುಷ್ಯ ಅನೇಕ ರೀತಿ ಕಾಯಿಲೆಗಳಿಗೆ ತುತ್ತಾಗುತ್ತಾನಂತೆ. ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೆಂಪು ಮೆಣಸಿನ ಪುಡಿಯನ್ನು ಸೇರಿಸಲಾಗುತ್ತದೆ. ಹಾಗಾದ್ರೆ ಖಾರ ಹೆಚ್ಚು ಸೇವಿಸುವುದರಿಂದ ಯಾವೆಲ್ಲಾ ರೋಗಗಳು ವಕ್ಕರಿಸುತ್ತೆ ಅನ್ನೋದನ್ನು ತಿಳಿಯೋಣ.
ಕೆಂಪು ಮೆಣಸಿನ ಪುಡಿ ಆರೋಗ್ಯಕ್ಕೆ ಒಳ್ಳೆಯದಲ್ಲ ಯಾಕೆ?
ಕೆಂಪು ಮೆಣಸಿನ ಪುಡಿಯು ಪಾಲಿಸಿಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ (ಪಿಎಹೆಚ್)ಗಳ ಮೂಲವಾಗಿದೆ ಇದನ್ನು ಕಾರ್ಸಿನೋಜೆನಿಕ್ ಎಂದು ಕರೆಯಲಾಗುತ್ತದೆ. ವಸ್ತುಗಳನ್ನು ಸುಟ್ಟಾಗ ಪಿಎಹೆಚ್ ಗಳು ಉತ್ಪತ್ತಿಯಾಗುತ್ತವೆ. ಮತ್ತು ಮೆಣಸಿನಕಾಯಿಗೆ ಹೆಚ್ಚಾಗಿ ಹೊಗೆಯಾಡಿಸಲಾಗುತ್ತದೆ ಅಥವಾ ಪುಡಿಯಾಗಿ ಪುಡಿಮಾಡುವ ಮಾಡುವ ಮೊದಲು ಒಣಗಿಸಲಾಗುತ್ತದೆ ಆದ್ದರಿಂದ ಇವುಗಳಲ್ಲಿ ಪಿಎಹೆಚ್ ಮಟ್ಟ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.
1. ಅತಿಸಾರ
ಖಾರವಾದ ಆಹಾರಗಳನ್ನು ಸೇವಿಸಿದಾಗ ನಾಲಿಗೆಗೆ ಹಿತ ಅನ್ನಿಸುತ್ತದೆ. ಆದರೆ ಅತಿಯಾಗಿ ನೀವು ಕೆಂಪು ಮೆಣಸಿನ ಪುಡಿಯನ್ನು ಸೇವಿಸಿದರೆ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ತುತ್ತಾಗುತ್ತೀರಿ. ಮಸಾಲೆಯುಕ್ತ ಆಹಾರವು ವ್ಯಕ್ತಿಯ ಆಹಾರದಲ್ಲಿನ ಪೋಷಕಾಂಶಗಳನ್ನು ನಾಶಪಡಿಸುತ್ತದೆ. ಮತ್ತು ವಿವಿಧ ಜೀರ್ಣಕಾರಿ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ಅಧ್ಯಯನಗಳಿಂದ ಸಾಭೀತಾಗಿದೆ. ಇನ್ನೂ ಇದು ಕೆಲವು ಸಂದರ್ಭಗಳಲ್ಲಿ ಅತಿಸಾರದಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ. ಇದಲ್ಲದೆ, ಕೆಂಪು ಮೆಣಸಿನ ಪುಡಿಯನ್ನು ಹೆಚ್ಚು ಸೇವಿಸುವುದರಿಂದ ನಿಮಗೆ ವಾಕರಿಕೆ ಉಂಟಾಗುತ್ತದೆ.
2. ಬಾಯಿಯಲ್ಲಿ ಹುಣ್ಣಾಗುತ್ತದೆ
ಕೆಂಪು ಮೆಣಸಿನ ಪುಡಿಯನ್ನು ಅತಿಯಾಗಿ ಸೇವಿಸುವುದರಿಂದ ಬಾಯಿಯಲ್ಲಿ ಹುಣ್ಣು ಉಂಟಾಗುತ್ತದೆ. ಇದಿಷ್ಟೇ ಅಲ್ಲ, ಕೆಂಪು ಮೆಣಸಿನಕಾಯಿ ತುಂಬಾ ಮಸಾಲೆಯುಕ್ತವಾಗಿದೆ. ಮತ್ತು ಅನೇಕ ಜನರು ಮಸಾಲೆಯುಕ್ತ ಆಹಾರವನ್ನು ತುಂಬಾನೇ ಇಷ್ಟಪಡುತ್ತಾರೆ. ಯಾರು ಹೆಚ್ಚು ಕೆಂಪು ಮೆಣಸಿನ ಪುಡಿಯನ್ನು ನಿಯಮಿತವಾಗಿ ಸೇವಿಸುತ್ತಾರೋ ಅವರ ಬಾಯಿಯಲ್ಲಿ ಗುಳ್ಳೆಗಳು ಉಂಟಾಗಬಹುದು. ಹೀಗಾಗಿ ಆದಷ್ಟು ಖಾರವಾದ ಆಹಾರನ್ನು ಸೇವಿಸೋದನ್ನು ಕಡಿಮೆ ಮಾಡಿ.
3. ಅಸ್ತಮಕ್ಕೆ ತುತ್ತಾಗುವ ಅಪಾಯವಿದೆ
ಆಧುನಿಕರಣದಿಂದಾಗಿ ಸಿಕ್ಕಾಪಟ್ಟೆ ವಾಯು ಮಾಲಿನ್ಯವಾಗ್ತಿದೆ. ಇದೇ ಕಾರಣಕ್ಕೆ ಭಾರತದಲ್ಲಿ ಲಕ್ಷಾಂತರ ಜನರು ಅಸ್ತಮಕ್ಕೆ ತುತ್ತಾಗುತ್ತಿದ್ದಾರೆ. ಇದೀಗ ಮತ್ತೊಂದು ಬೆಚ್ಚಿ ಬೀಳಿಸೋ ಸಂಗತಿ ಅಂದ್ರೆ ಕೆಂಪು ಮೆಣಸಿನಕಾಯಿಯನ್ನು ತಿನ್ನುವುದರಿಂದ ಆಸ್ತಮಾ ದಾಳಿಯ ಅಪಾಯವನ್ನು ಹೆಚ್ಚಿಸುತ್ತಂತೆ. ಅದ್ರಲ್ಲೂ ಇದು ಆಸ್ತಮಾ ಅಥವಾ ಉಸಿರಾಟದ ಕಾಯಿಲೆ ಇರುವವರಿಗೆ ತುಂಬಾನೇ ಅಪಾಯಕಾರಿಯಾಗಿದೆ.
4. ಹೊಟ್ಟೆಯಲ್ಲಿರುವ ಮಗುವಿಗೆ ತೊಂದರೆಯಾಗುತ್ತದೆ
ಗರ್ಭಿಣಿಯರು ಗರ್ಭಾವಸ್ಥೆಯ ಸಂದರ್ಭದಲ್ಲಿ ತುಂಬಾನೇ ಜಾಗೃತೆ ವಹಿಸಬೇಕು. ಅದ್ರಲ್ಲೂ ಅತಿಯಾದ ಖಾರವಾದ ಆಹಾರಗಳನ್ನು ತಿನ್ನಲೇಬಾರದು. ಮಗುವಿನ ಉಸಿರಾಟಕ್ಕೆ ತೊಂದರೆಯಾಗುವುದು ಮಾತ್ರವಲ್ಲದೇ, ಮಗುವಿಗೆ ಉಸಿರಾಟದ ಕಾಯಿಲೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಗರ್ಭಿಣಿಯಾಗಿದ್ದರೆ ಹೆಚ್ಚು ಕೆಂಪು ಮೆಣಸಿನಕಾಯಿಯನ್ನು ತಿನ್ನೋದಕ್ಕೆ ಹೋಗಲೇಬೇಡಿ.
5. ಹೊಟ್ಟೆಯಲ್ಲಿ ಹುಣ್ಣು
ಬಾಯಿಗೆ ರುಚಿಸುತ್ತೆ ಎಂದು ಅತಿಯಾಗಿ ಕೆಂಪು ಮೆಣಸಿನ ಪುಡಿ ಹಾಕಿದ ಆಹಾರವನ್ನು ಸೇವಿಸಿದರೆ ನಿಮ್ಮ ಹೊಟ್ಟೆಯಲ್ಲಿ ಹುಣ್ಣು ಬೆಳೆಯುವ ಅಪಾಯವಿದೆ. ಅಫ್ಲಾಟಾಕ್ಸಿನ್ ಎಂಬ ರಾಸಾಯನಿಕವು ಕೆಂಪು ಮೆಣಸಿನಕಾಯಿಯಲ್ಲಿ ಕಂಡುಬರುತ್ತದೆ. ಇದು ತುಂಬಾನೇ ಅಪಾಯಕಾರಿ. ಇದರಿಂದಾಗಿ ಹೊಟ್ಟೆಯ ಹುಣ್ಣು, ಯಕೃತ್ತಿನ ಸಿರೋಸಿಸ್ ಮತ್ತು ಕರುಳಿನ ಕ್ಯಾನ್ಸರ್ ಅನ್ನು ಅಭಿವೃದ್ಧಿ ಪಡಿಸುವ ಸಾಧ್ಯತೆ ಕೂಡ ಹೆಚ್ಚಾಗಿದೆ.
ಅತಿಯಾದ್ರೆ ಅಮೃತವು ವಿಷವಾಗುತ್ತಂತೆ. ನಮ್ಮ ದೇಹದ ವ್ಯವಸ್ಥೆ ತುಂಬಾನೇ ಸೂಕ್ಷ್ಮ. ದೇಹದ ಆರೋಗ್ಯಕ್ಕಾಗಿ ನಾವು ಎಲ್ಲಾ ಆಹಾರಗಳನ್ನು ಇಂತಿಷ್ಟು ಪ್ರಮಾಣದಲ್ಲಿ ಮಾತ್ರ ಸೇವನೆ ಮಾಡಬೇಕು. ಖಾರ ಇಷ್ಟ ಅಂತ ಸಿಕ್ಕಾಪಟ್ಟೆ ತಿನ್ನೋದಕ್ಕೆ ಹೋದರೆ ದೇಹವು ರೋಗದ ಕೂಪವಾಗೋದ್ರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಕಡಿಮೆ ಖಾರ ತಿನ್ನಿಸಿ ಅಭ್ಯಾಸ ಮಾಡಿ. ಇಲ್ಲದಿದ್ದರೆ ಮಕ್ಕಳು ದೊಡ್ಡದಾದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಖಾರ ತಿನ್ನೋದನ್ನು ರೂಢಿಸಿಕೊಳ್ಳುತ್ತಾರೆ. ಅದಕ್ಕೆ ಹೇಳೋದು ರೋಗ ಬರೋದಕ್ಕೂ ಮೊದಲು ಮುಂಜಾಗೃತಾ ಕ್ರಮ ತೆಗೆದುಕೊಂಡರೆ ಒಳ್ಳೆಯದು ಎಂದು.