ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತಿ ತೂಮಿನಾಡು ಅಂಗನವಾಡಿಯ ಮುಂಭಾಗದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿ ನಿಧಿಯಿಂದ ಮಂಜೂರಾಗಿರುವ ಬಾವಿಯೊಂದರ ಕಾಮಗಾರಿ ಅರ್ಧದಲ್ಲೇ ಮೊಟಕುಗೊಂಡು, ಗುತ್ತಿಗೆದಾರ ಬಿಟ್ಟು ಹೋಗಿರುವುದು ಸ್ಥಳೀಯರ ಹಲವು ಆತಂಕಗಳಿಗೆ ಕಾರಣವಾಗಿದೆ.
ಬಾವಿಯನ್ನು ಅರ್ಧ ಅಗೆದು ಹಾಗೆಯೇ ಬಿಡಲಾಗಿದೆ. ಬಾಯಿ ತೆರೆದು ಕೊಂಡಿರುವ ಈ ಬಾವಿಯಲ್ಲಿ ಈಗ ನೀರಿಲ್ಲದಿದ್ದರೂ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿರುವ ಮಳೆಯಿಂದ ನೀರು ತುಂಬಿ ಸಮಸ್ಯೆಗೆ ಕಾರಣವಾಗಲಿದೆ. ಇದರ ಪಕ್ಕದಿಂದಲೇ ಚಿಣ್ಣರು ಅಂಗನವಾಡಿಗೆ ತೆರಳ ಬೇಕಾಗಿದೆ. ಅಪಾಯವನ್ನು ಆಹ್ವಾನಿಸುವ ರೀತಿಯಲ್ಲಿ ತೆರೆದಿಟ್ಟಿರುವ ಬಾವಿಯಿಂದಾಗಿ ಅಪಾಯ ತಪ್ಪಿದ್ದಲ್ಲ. ಜೊತೆಗೆ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಕೂಡಾ ಇಲ್ಲದ ಈ ಪರಿಸರದಲ್ಲಿ ದ್ವಿ ಚಕ್ರ ವಾಹನಗಳು ಸೇರಿದಂತೆ ಹಲವಾರು ವಾಹನಗಳು ಈ ದಾರಿಯಾಗಿ ಸಾಗುತ್ತವೆ. ಕತ್ತಲಲ್ಲಿ ತೆರೆದ ಬಾವಿಯನ್ನು ಕಾಣದೆ ಅನಾಹುತ ಸಂಭವಿಸುವ ಸಾಧ್ಯತೆ ಭಾರೀ ಹೆಚ್ಚು.
ಇದೆಲ್ಲವೂ ಸ್ಥಳೀಯರನ್ನು ಇಕ್ಕಟ್ಟಿಗೆ ತಲುಪಿಸಿದೆ. ಬಾವಿಯನ್ನು ತೋಡುವಾಗ ಸ್ಥಳೀಯರು ಖುಷಿ ಪಟ್ಟಿದ್ದರೂ ಈ ರೀತಿಯಾಗಿ ಅರ್ಧದಲ್ಲಿ ಮೊಟಕುಗೊಂಡು ಅಪಾಯವನ್ನು ಆಹ್ವಾನಿಸುವ ಬಾವಿಯಾಗಬಹುದೆಂದು ಯಾರೂ ಊಹಿಸಿರಿಯಲಿಲ್ಲವೆನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ಹಲವು ಬಾರಿ ಬ್ಲಾಕ್ ಪಂಚಾಯತಿ ಸದಸ್ಯೆಯ ಗಮನಕ್ಕೆ ತಂದಿದ್ದರೂ ಇತ್ತ ತಿರುಗಿಯೂ ನೋಡಿಲ್ಲವೆಂಬುದಾಗಿ ಸ್ಥಳೀಯರು ಆರೋಪಿಸುತಿದ್ದಾರೆ. ಸಂಬಂಧ ಪಟ್ಟವರು ಕೂಡಲೇ ಇತ್ತ ಕಡೆ ಗಮನ ಹರಿಸಿ ಅವಘಡ ಸಂಭವಿಸಿ ರಾಷ್ಟ್ರಮಟ್ಟದ ಸುದ್ದಿಯಾಗುದಕ್ಕಿಂತ ಮುಂಚಿತವಾಗಿ ಇದಕ್ಕೊಂದು ಪರಿಹಾರವನ್ನು ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.