ನವದೆಹಲಿ: ಲಿಂಗಾಯತ ಸೇರಿದಂತೆ ವಿವಿಧೆಡೆ, ಹಲವು ಸಮುದಾಯಗಳಿಂದ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಕೇಳಿಬಂದಿದ್ದ ತೀವ್ರ ಒತ್ತಡ ಹಾಗೂ ಪ್ರತಿಭಟನೆಗಳ ಹೊರತಾಗಿಯೂ ಜನಗಣತಿಯಲ್ಲಿ ಪ್ರಮುಖವಾಗಿ ಆರು ಧರ್ಮಗಳನ್ನಷ್ಟೇ ಪರಿಗಣಿಸಲು ತೀರ್ಮಾನಿಸಲಾಗಿದೆ.
ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಸಿಖ್ ಮತ್ತು ಜೈನ ಧರ್ಮಗಳನ್ನು ಆಧರಿಸಿ ಮುಂದಿನ ಜನಗಣತಿ ನಡೆಯಲಿದೆ. ಈ ಕುರಿತ ಕಾಲಂನಲ್ಲಿ ಇತರೆ ಯಾವುದೇ ಧರ್ಮ ಉಲ್ಲೇಖಿಸಲು ಅವಕಾಶವಿದೆ. ಆದರೆ, ಅದಕ್ಕಾಗಿ ಪ್ರತ್ಯೇಕವಾಗಿ ಕೋಡ್ ನಿಗದಿಪಡಿಸಿರುವುದಿಲ್ಲ.
ಈ ಮಾಹಿತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಚೆಗೆ ಗಣತಿ ಭವನದಲ್ಲಿ ಬಿಡುಗಡೆ ಮಾಡಿರುವ '1981ರಿಂದ ಭಾರತದಲ್ಲಿ ಜನಗಣತಿ' ಕುರಿತ ಕೈಪಿಡಿಯಲ್ಲಿ ಉಲ್ಲೇಖಿಸಲಾಗಿದೆ.
ಲಿಂಗಾಯತ ಅಲ್ಲದೆ, ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು ಎಂಬ ಒತ್ತಡ ಜಾರ್ಖಂಡ್, ಛತ್ತೀಸಗಢ, ಒಡಿಶಾದಲ್ಲೂ ಕೇಳಿಬಂದಿತ್ತು. ಅಲ್ಲಿ, ಪ್ರಕೃತಿಯನ್ನು ಆರಾಧಿಸುವ ಜನರು 'ಸರ‍್ನಾ'ಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸಿದ್ದರು.
ಜನಗಣತಿ ಅಧಿಕಾರಿಗಳ ಪ್ರಕಾರ, ಧರ್ಮವಾರು ಕೋಡ್‌ಗಳನ್ನು ಜನಗಣತಿ 2011ರ ದತ್ತಾಂಶ ಆಧರಿಸಿ ಹಾಗೂ ದತ್ತಾಂಶದ ಬಳಕೆದಾರರ ಸಮ್ಮೇಳನದಲ್ಲಿ ಭಾಗಿದಾರರ ಜೊತೆಗಿನ ಚರ್ಚೆಯನ್ನು ಆಧರಿಸಿ ಆರು ಧರ್ಮಗಳನ್ನು ಅಷ್ಟೇ ಉಲ್ಲೇಖಿಸಲಾಗಿದೆ.
ಎರಡು ಹಂತದಲ್ಲಿ 'ಜನಗಣತಿ-2021' ನಡೆಸಲು ಉದ್ದೇಶಿಸಲಾಗಿತ್ತು. ಕೋವಿಡ್ ಕಾರಣದಿಂದ ಅನಿರ್ದಿಷ್ಟಾವಧಿಗೆ ಕೇಂದ್ರ ಮುಂದೂಡಿತ್ತು. ಮುಂದಿನ ಜನಗಣತಿ ಪ್ರಕ್ರಿಯೆಗೆ ಡಿಜಿಟಲ್ ಸ್ಪರ್ಶವಿರಲಿದೆ. ಜನರು ಮನೆಯಲ್ಲಿ ಕುಳಿತೇ ಪ್ರಶ್ನೋತ್ತರ ಭರ್ತಿ ಮಾಡಬಹುದು.
ಮೊದಲ ಹಂತದಲ್ಲಿ ಮನೆ ಮನೆ ಗಣತಿ, ಕುಟುಂಬಗಳ ಮಾಹಿತಿ ಪಡೆಯಲಿದ್ದು, 31 ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಜ.9, 2020ರಲ್ಲಿಯೇ ಅಧಿಸೂಚನೆ ಹೊರಬಿದ್ದಿದೆ. 2ನೇ ಹಂತದ ಜನಗಣತಿಯಲ್ಲಿ 28 ಪ್ರಶ್ನೆಗಳಿರುತ್ತವೆ. ಈ ಕುರಿತು ಇನ್ನು ಅಧಿಸೂಚನೆ ಪ್ರಕಟಿಸಬೇಕಾಗಿದೆ.
ಪ್ರಾಕೃತಿಕ ವಿಕೋಪ ಸೇರ್ಪಡೆ: ಜನರ ವಲಸೆಗೆ ಕಾರಣ ಆಗಬಹುದಾದ ಪರಿಣಾಮಗಳ ಪಟ್ಟಿಗೆ ಪ್ರಾಕೃತಿಕ ವಿಕೋಪ ಸೇರಿಸಲಾಗಿದೆ. ಶಿಕ್ಷಣ, ಮದುವೆ, ಕೆಲಸ ಹೊರತುಪಡಿಸಿ ಕುಟುಂಬ/ಒಬ್ಬರೇ ವಲಸೆ ಹೋಗಲು ಪ್ರಕೃತಿ ವಿಕೋಪ ಕಾರಣವೇ ಎಂದು ತಿಳಿಯುವುದು ಇದರ ಉದ್ದೇಶ.
ಎರಡನೇ ಹಂತದ ಗಣತಿಯಲ್ಲಿ ಇದೇ ಮೊದಲ ಬಾರಿಗೆ ಹೆಚ್ಚುವರಿ ಮಾಹಿತಿ ದಾಖಲಿಸಲು ಕೋಡ್ ಮಾದರಿ ಅನುಸರಿಸಲಾಗುತ್ತದೆ. ಕುಟುಂಬದ ಮುಖ್ಯಸ್ಥರ ಜೊತೆಗಿನ ಸಂಬಂಧ, ಮಾತೃಭಾಷೆ, ತಿಳಿದಿರುವ ಇತರೆ ಭಾಷೆಗಳು, ವೃತ್ತಿ, ಕೆಲಸ/ಸೇವೆಯ ಸ್ವರೂಪ, ಜನ್ಮಸ್ಥಳ, ಪರಿಶಿಷ್ಟ ಜಾತಿ, ಪಂಗಡ ಇತ್ಯಾದಿ ವಿವರ ದಾಖಲಾಗಿದೆ ನಿರ್ದಿಷ್ಟ ಕೋಡ್ ಇರುತ್ತವೆ. ಪೂರಕವಾಗಿ ಬರುವ ಸಂಭವನೀಯ ಉತ್ತರಗಳನ್ನು ದಾಖಲಿಸಲು ಉಪ ಕೋಡ್ ಬಳಸಲಾಗುತ್ತದೆ ಎಂದು ವರದಿ ತಿಳಿಸಿದೆ.
ಜನಗಣತಿ ಪ್ರಕ್ರಿಯೆ ನಡೆಯುವ ಪರಿಷ್ಕೃತ ವೇಳಾಪಟ್ಟಿ ಕುರಿತ ವಿವರಗಳನ್ನು ಇನ್ನೂ ಪ್ರಕಟಿಸಿಲ್ಲ.
ಸಾಂದರ್ಭಿಕ ಚಿತ್ರ