ನವದೆಹಲಿ: ಕಾಂಗ್ರೆಸ್ನ 'ಶಾಹಿ ಪರಿವಾರ' (ರಾಜಮನೆತನ) ದ ಬಗೆಗಿನ ಹೇಳಿಕೆಗಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು, ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರು ಭಾರತಕ್ಕಾಗಿ 'ರಕ್ತ' ಸುರಿಸಿದ್ದನ್ನು ರಾಷ್ಟ್ರವು ನೋಡಿದೆ ಎಂದು ಪ್ರತಿಪಾದಿಸಿದರು.
ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಇಬ್ಬರೂ ಕ್ರಮವಾಗಿ 1984 ಮತ್ತು 1991 ರಲ್ಲಿ ಹತ್ಯೆಯಾದರು. ಯುಪಿಎ 1 ಮತ್ತು 2 ರ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಕಪಿಲ್ ಸಿಬಲ್, ಕಳೆದ ವರ್ಷ ಮೇ ತಿಂಗಳಲ್ಲಿ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾದರು. ಅವರು ಇತ್ತೀಚೆಗೆ, ಅನ್ಯಾಯದ ವಿರುದ್ಧ ಹೋರಾಡುವ ಉದ್ದೇಶದಿಂದ ಚುನಾವಣೇತರ ವೇದಿಕೆ 'ಇನ್ಸಾಫ್' ಅನ್ನು ಘೋಷಿಸಿದರು. ಕರ್ನಾಟಕದಲ್ಲಿ ಭಾನುವಾರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕರ್ನಾಟಕದ ಪ್ರತಿಷ್ಠೆ, ಸಾರ್ವಭೌಮತೆ ಮತ್ತು ಸಮಗ್ರತೆಗೆ ಧಕ್ಕೆ ತರಲು ತಮ್ಮ ಪಕ್ಷ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರನ್ನು ಹೇಳದೆ ಮೋದಿ, 'ಕರ್ನಾಟಕದ ಸಾರ್ವಭೌಮತ್ವವನ್ನು ರಕ್ಷಿಸುವುದಾಗಿ ಕಾಂಗ್ರೆಸ್ ಹೇಳುತ್ತದೆ.
ಆದರೆ, ಕರ್ನಾಟಕವನ್ನು ಭಾರತದಿಂದ ದೂರ ಮಾಡಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಇದು ದೇಶದ ಸ್ವಾತಂತ್ರ್ಯಕ್ಕಾಗಿ ಮತ್ತು ರಾಷ್ಟ್ರಾಭಿಮಾನದ ಪರವಾಗಿ ಹೋರಾಡಿದ ಲಕ್ಷಾಂತರ ಕನ್ನಡಿಗರಿಗೆ ಮಾಡಿದ ಅವಮಾನವಾಗಿದೆ' ಎಂದರು.
'ಕಾಂಗ್ರೆಸ್ನ ರಾಜಮನೆತನವು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತದೆ ಮತ್ತು ಭಾರತದ ವಿರುದ್ಧವಾಗಿರುವ ದೇಶಗಳ ರಾಜತಾಂತ್ರಿಕರನ್ನು ರಹಸ್ಯವಾಗಿ ಭೇಟಿ ಮಾಡುತ್ತದೆ.
ಕಾಂಗ್ರೆಸ್ಗೆ ರಾಜಕೀಯ ಆಮ್ಲಜನಕ ನೀಡಬೇಡಿ ಎಂದು ನಾನು ಕರ್ನಾಟಕದ ಜನತೆಗೆ ಮನವಿ ಮಾಡುತ್ತೇನೆ' ಎಂದರು. 'ಕರ್ನಾಟಕ ಮಾತ್ರವಲ್ಲ, ಇಡೀ ದೇಶಕ್ಕೆ ನಾನು ಬಹಳ ನೋವಿನಿಂದ ಹೇಳಲು ಬಯಸುತ್ತೇನೆ. ಕರ್ನಾಟಕದ ಸಾರ್ವಭೌಮತ್ವ, ಇದರ ಅರ್ಥವೇನು ಗೊತ್ತಾ?. ಅವರು ಇಷ್ಟು ವರ್ಷ ಸಂಸತ್ತಿನಲ್ಲಿ ಕುಳಿತು, ಭಾರತದ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಮತ್ತು ಅವರು ಈಗ ಇದನ್ನು ಹೇಳುತ್ತಿದ್ದಾರೆ ಎಂದು ಮೋದಿ ಹೇಳಿದರು. ಒಂದು ದೇಶ ಸ್ವತಂತ್ರವಾದಾಗ ಮಾತ್ರ ಆ ದೇಶವನ್ನು ಸಾರ್ವಭೌಮ ರಾಷ್ಟ್ರ ಎಂದು ಕರೆಯಲಾಗುತ್ತದೆ. ಕಾಂಗ್ರೆಸ್ ಈಗ ಹೇಳುತ್ತಿರುವುದರ ಅರ್ಥವೇನೆಂದರೆ, ಕರ್ನಾಟಕವು ಭಾರತದಿಂದ ಪ್ರತ್ಯೇಕವಾಗಬೇಕು ಎಂಬುದಾಗಿದೆ' ಎಂದು ಹೇಳಿದರು.