ನವದೆಹಲಿ : ಹವಾಮಾನ ಬದಲಾವಣೆಯು ಚಿಕ್ಕ ಗಾತ್ರದ ಪಕ್ಷಿಗಳಿಗಿಂತ ದೊಡ್ಡಗಾತ್ರದ ಪಕ್ಷಿಗಳು ಮತ್ತು ವಲಸೆ ಹಕ್ಕಿಗಳಲ್ಲಿ ಅತಿಹೆಚ್ಚು ಪ್ರತಿಕೂಲ ಪರಿಣಾಮ ಉಂಟುಮಾಡುತ್ತಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.
1970ರಿಂದ 2019ರ ಅವಧಿಯಲ್ಲಿ ಜಾಗತಿಕ ಹವಾಮಾನ ಬದಲಾವಣೆ ಕಾರಣದಿಂದಾಗಿ ಪಕ್ಷಿಗಳ ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ಬದಲಾವಣೆ ಕುರಿತು ಸಂಶೋಧಕರು ಅಧ್ಯಯನ ನಡೆಸಿದ್ದಾರೆ.
ಪಕ್ಷಿಗಳು ಮೊಟ್ಟೆ ಅಥವಾ ಮರಿ ಮಾಡುವ ಋತುವಿನಲ್ಲಿ ತಾಪಮಾನ ಹೆಚ್ಚಳದಿಂದ ವಲಸೆ ಹಕ್ಕಿಗಳು ಮತ್ತು ದೊಡ್ಡ ಗಾತ್ರದ ಪಕ್ಷಿಗಳಲ್ಲಿ ಸಂತಾನೋತ್ಪತ್ತಿ ಪ್ರಮಾಣವು ಕಡಿಮೆಯಾಗಿದೆ. ಇದೇ ವೇಳೆ ಚಿಕ್ಕ ಗಾತ್ರದ ಹಕ್ಕಿಗಳು ಮತ್ತು ಹೆಚ್ಚು ಚಲನೆ ಇರದ ಹಕ್ಕಿ ಪ್ರಭೇದಗಳಲ್ಲಿ ಸಂತಾನೋತ್ಪತ್ತಿ ಪ್ರಮಾಣ ಹೆಚ್ಚಾಗಿದೆ.
ಶೇ 56.7ರಷ್ಟು ಪಕ್ಷಿ ಪ್ರಬೇಧದಲ್ಲಿ ಸಂತಾನೋತ್ಪತ್ತಿ ಇಳಿಕೆ ಕಂಡಿದೆ ಮತ್ತು ಶೇ 43.3ರಷ್ಟು ಪ್ರಭೇದಗಳಲ್ಲಿ ಏರಿಕೆ ಕಂಡಿದೆ.
ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವುದರಲ್ಲಿ ದೇಹದ ತೂಕವೂ ಪ್ರಮುಖ ಪಾತ್ರವಹಿಸುತ್ತದೆ. ಚಿಕ್ಕ ಗಾತ್ರದ ಮತ್ತು ಹೆಚ್ಚು ಚಲನೆ ಹೊಂದಿಲ್ಲದ ಪಕ್ಷಿಗಳಿಗೆ ಹೋಲಿಸಿದರೆ ದೊಡ್ಡ ಗಾತ್ರದ ಪಕ್ಷಿಗಳು ಬದಲಾಗುವ ಹವಾಮಾನದ ಜೊತೆ ಹೊಂದಿಕೊಳ್ಳಲು ಪ್ರಯಾಸಪಡುತ್ತವೆ ಎಂದು ತಮಿಳುನಾಡಿನ ಅನ್ಬನಾಥಪುರಂ ವಹೈರ ಚಾರಿಟಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜೆ. ಪಾಂಡ್ಯನ್ ಹೇಳಿದ್ದಾರೆ.
ಏಕಕಾಲಕ್ಕೆ ಹೆಚ್ಚು ಮೊಟ್ಟೆಗಳನ್ನು ಇಟ್ಟು ಕಾವುಕೊಡುವ ಪಕ್ಷಿಗಳಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆ ದರವೂ ತಾಪಮಾನದ ಜೊತೆ ಹೆಚ್ಚಳವಾಗಿದೆ. ಏಕಕಾಲಕ್ಕೆ ಒಂದೇ ಮೊಟ್ಟೆ ಇಟ್ಟು ಕಾವು ಕೊಡುವ ಪಕ್ಷಿಗಳಲ್ಲಿ ತಾಪಮಾನ ಹೆಚ್ಚಳವು ಯಾವ ಬದಲಾವಣೆಯನ್ನೂ ಮಾಡಿಲ್ಲ ಎಂದು ಅಧ್ಯಯನ ಹೇಳಿದೆ.
'ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಗೆ ಕಾರಣವಾಗಿರುವ ಅಂಶಗಳ ಕುರಿತು ಪರಿವೀಕ್ಷಣೆ ನಡೆಸಬೇಕು ಮತ್ತು ಈ ಕಾರಣಗಳಿಂದ ಸಂಕಷ್ಟದಲ್ಲಿರುವ ಪ್ರಭೇದಗಳನ್ನು ಸಂರಕ್ಷಿಸಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ತಾಪಮಾನ ಸಹಿಸಲು ಸಾಧ್ಯವಿಲ್ಲದ ಜೀವಿಗಳು ಅಳಿದುಹೋಗುತ್ತವೆ' ಎಂದು ಪಾಂಡ್ಯನ್ ಹೇಳಿದ್ದಾರೆ.