ಮಂಜೇಶ್ವರ: ಸರ್ಕಾರದ ನೀತಿ ಸಾಮಾನ್ಯ ಜನರು ಮತ್ತು ಮೂಲ ವರ್ಗದ ಜನರಿಗೆ ಹೆಚ್ಚಿನ ಗಮನ ನೀಡುವುದು ಮತ್ತು ಸಚಿವರುಗಳ ನೇತೃತ್ವದಲ್ಲಿ ಸಾಮಾನ್ಯ ಜನರನ್ನು ತಲುಪುವ ಕಾರ್ಯಕ್ರಮಗಳು ಎಂದು ರಾಜ್ಯ ಬಂದರು, ಪುರಾತತ್ವ ಮತ್ತು ವಸ್ತು ಸಂಗ್ರಹಾಲಯ ಇಲಾಖೆ ಸಚಿವ ಅಹ್ಮದ್ ದೇವರಕೋವಿಲ್ ತಿಳಿಸಿದರು.
ಮಂಜೇಶ್ವರ ತಾಲೂಕು ಕುಂದುಕೊರತೆ ನಿವಾರಣಾ ಅದಾಲತ್‍ನಲ್ಲಿ 'ಭರವಸೆಯ ನೆರವು(ಕರುತಲೋಡೆ ಕೈತಾಂಗ್)' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕ ಕುಂದುಕೊರತೆಗಳ ತ್ವರಿತ ಪರಿಹಾರವನ್ನು ಸಕ್ರಿಯಗೊಳಿಸುವುದು ಈ ಅದಾಲತ್‍ಗಳ ಮುಖ್ಯ ಉದ್ದೇಶವಾಗಿದೆ. ನಾಗರಿಕರ ಹಕ್ಕುಗಳು ಮತ್ತು ಸವಲತ್ತುಗಳನ್ನು ಸಕಾಲದಲ್ಲಿ ಒದಗಿಸಲು ಮತ್ತು ತಾಂತ್ರಿಕ ಅಡಚಣೆಗಳಿಂದ ನಿರ್ಬಂಧಿಸಲ್ಪಟ್ಟಿರುವ ಮತ್ತು ಗ್ರಾಹಕರಿಗೆ ಸುಲಭವಾಗಿ ಲಭ್ಯವಾಗದ ಸವಲತ್ತುಗಳನ್ನು ತಲುಪಿಸಲು ಇಂತಹ ತಾಲೂಕು ಅದಾಲತ್‍ಗಳನ್ನು ಆಯೋಜಿಸಲಾಗಿದೆ. ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಪೂರ್ಣಗೊಂಡಿರುವ ತಾಲೂಕು ಅದಾಲತ್‍ಗಳ ಮೂಲಕ ಸಾವಿರಾರು ಕುಂದುಕೊರತೆಗಳನ್ನು ನಿವಾರಿಸಲಾಗಿದೆ. ಮಂಜೇಶ್ವರ ತಾಲೂಕಿನ ಕುಂದುಕೊರತೆಗಳನ್ನೂ ಪರಿಹರಿಸಲಾಗುವುದು. ಜನ ಸಾಮಾನ್ಯರಿಗೆ ಸಚಿವರುಗಳ ನೇತೃತ್ವದ ಇಂತಹ ಚಟುವಟಿಕೆಗಳು ಜನರಲ್ಲಿ ದೊಡ್ಡ ಭರವಸೆ ನೀಡುತ್ತವೆ. ಆರೋಗ್ಯ ಸೂಚ್ಯಂಕ, ಜೀವನದ ಗುಣಮಟ್ಟ ಸೂಚ್ಯಂಕ, ಪ್ರಾಥಮಿಕ ಶಿಕ್ಷಣ ಮಟ್ಟ ಮತ್ತು ಲಿಂಗ ಸಮಾನತೆಯಿಂದ ಪ್ರಾರಂಭಿಸಿ ಎಲ್ಲಾ ಕ್ಷೇತ್ರಗಳಲ್ಲಿ ಕೇರಳವು ಇತರ ರಾಜ್ಯಗಳಿಗಿಂತ ಬಹಳ ಮುಂದಿದೆ. ರಾಜ್ಯ ಸರ್ಕಾರ ಎಲ್ಲರನ್ನೂ ಒಳಗೊಳ್ಳುವ ಮತ್ತು ಸಾಮಾಜಿಕ ನ್ಯಾಯಾಧಾರಿತ ಅಭಿವೃದ್ಧಿಯನ್ನು ಖಾತ್ರಿಪಡಿಸಿಕೊಂಡು ಮುನ್ನಡೆಯುತ್ತಿರುವುದರಿಂದ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯಲು ಸಾಧ್ಯವಾಗಿದೆ. ಸಮಾಜದ ಮೂಲ ವರ್ಗ ಹಾಗೂ ಜನ ಸಾಮಾನ್ಯರನ್ನು ಪರಿಗಣಿಸಿ ಅವರಿಗೆ ಆದ್ಯತೆ ನೀಡುವ ಮೂಲಕ ರಾಜ್ಯ ಸರ್ಕಾರ ಮುನ್ನಡೆಯುತ್ತಿದೆ ಎಂದು ಸಚಿವರು ಹೇಳಿದರು.
ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರದ ಅಗತ್ಯಗಳನ್ನು ರಾಜ್ಯ ಸರ್ಕಾರ ಸದಾ ಗಂಭೀರವಾಗಿ ಪರಿಗಣಿಸುತ್ತಿದ್ದು, ಕಳೆದ ವಾರ ಕರಾವಳಿ ಭಾಗದ ಜನರಿಗಾಗಿ ಆಯೋಜಿಸಿದ್ದ ಕರಾವಳಿ ಸಭೆ ಅತ್ಯಂತ ಉಪಯುಕ್ತವಾಗಿದೆ ಎಂದು ಶಾಸಕ ಎ.ಕೆ.ಎಂ.ಅಶ್ರಫ್ ಹೇಳಿದರು. ಮಂಜೇಶ್ವರದ ಅಭಿವೃದ್ಧಿಗೆ ಸರ್ಕಾರ ಹಾಗೂ ಸಚಿವರ ಹೆಚ್ಚಿನ ಮಧ್ಯಸ್ಥಿಕೆ ವಹಿಸುವ ನಿರೀಕ್ಷೆ ಇದೆ ಎಂದು ಶಾಸಕರು ಹೇಳಿದರು.
ಜಿಲ್ಲಾಧಿಕಾರಿ ಕೆ.ಇಂಪಾಶೇಖರ್ ಮುಖ್ಯ ಅತಿಥಿಯಾಗಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಶೆಮೀನಾ ಟೀಚರ್, ಮಂಗಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಬೀನಾ ನೌಫಲ್, ಮಂಜೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೀನ್ ಲೆವಿನಾ ಮೊಂತೆರೊ, ಪೈವಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಜಯಂತಿ, ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಆಳ್ವ, ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಎಸ್.ಸೋಮಶೇಖರ, ಆರ್.ಡಿ.ಒ. ಅತುಲ್ ಸ್ವಾಮಿನಾಥ ಮತ್ತಿತರರು ಮಾತನಾಡಿದರು. ಎಡಿಎಂ ಕೆ.ನವೀನ್ ಬಾಬು ಸ್ವಾಗತಿಸಿ, ಕಾಸರಗೋಡು ಉಪಜಿಲ್ಲಾಧಿಕಾರಿ ಜಗ್ಗಿ ಪೌಲ್ ವಂದಿಸಿದರು.