ನವದೆಹಲಿ: ತನ್ನ ಸೂಚನೆಯ ಹೊರತಾಗಿಯೂ ಜಾರಿ ನಿರ್ದೇಶನಾಲಯದ (ಇ.ಡಿ) ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಸೇವಾವಧಿ ವಿಸ್ತರಿಸಿರುವ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, 'ಸಂಸ್ಥೆಗೆ ಒಬ್ಬ ವ್ಯಕ್ತಿ ಇಷ್ಟೊಂದು ಅನಿವಾರ್ಯವೇ' ಎಂದು ಪ್ರಶ್ನಿಸಿದೆ.
ಮಿಶ್ರಾ ಅವರ ಸೇವಾವಧಿ ವಿಸ್ತರಣೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ಕಾನೂನಿಗೆ ತಿದ್ದುಪಡಿ ಮಾಡಿರುವ ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸಿ ಹಲವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ದಾಖಲಿಸಿದ್ದರು.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ವಿಕ್ರಂ ನಾಥ್ ಹಾಗೂ ಸಂಜಯ್ ಕರೋಲ್ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ ಬುಧವಾರ ಇವುಗಳ ವಿಚಾರಣೆ ನಡೆಸಿತು.
'ಈ ಹುದ್ದೆಯನ್ನು ನಿಭಾಯಿಸಬಲ್ಲ ಸಮರ್ಥ ಅಧಿಕಾರಿ ಬೇರೆ ಯಾರೂ ಇಲ್ಲವೇ? ಸಂಸ್ಥೆಗೆ ಒಬ್ಬ ವ್ಯಕ್ತಿ ಇಷ್ಟೊಂದು ಅನಿವಾರ್ಯವೇ' ಎಂದು ನ್ಯಾಯಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿತು.
'ಈ ಹುದ್ದೆ ನಿಭಾಯಿಸಬಲ್ಲ ಸಮರ್ಥ ಅಧಿಕಾರಿ ಸಂಸ್ಥೆಯಲ್ಲಿ ಇಲ್ಲ ಎಂದು ನೀವು (ಮೆಹ್ತಾ) ಹೇಳುತ್ತಿದ್ದೀರಿ. 2023ರ ಬಳಿಕ ಮಿಶ್ರಾ ನಿವೃತ್ತರಾಗಲಿದ್ದಾರೆ. ಆಗ ಸಂಸ್ಥೆಯ ಗತಿಯೇನು' ಎಂದೂ ಕೇಳಿತು.
'ಆಡಳಿತಾತ್ಮಕ ಕಾರಣಗಳಿಂದಾಗಿ ಮಿಶ್ರಾ ಅವರ ಸೇವಾವಧಿ ವಿಸ್ತರಣೆ ಮಾಡುವುದು ಅನಿವಾರ್ಯವಾಗಿತ್ತು. ಹಣ ಅಕ್ರಮ ವರ್ಗಾವಣೆ ತಡೆಗೆ ಭಾರತವು ಯಾವೆಲ್ಲಾ ಕ್ರಮ ಕೈಗೊಂಡಿದೆ ಎಂಬುದರ ಕುರಿತು ಹಣಕಾಸು ಕಾರ್ಯಪಡೆಯು (ಎಫ್‌ಎಟಿಎಫ್) ಈ ವರ್ಷ ವಿಮರ್ಶೆ ನಡೆಸಲಿದೆ. ಇಂತಹ ಸಮಯದಲ್ಲಿ ಇ.ಡಿ ನಿರ್ದೇಶಕರ ಹುದ್ದೆಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಲಾಗಿದೆ. ಮಿಶ್ರಾ ಅವರು ಎಫ್‌ಎಟಿಎಫ್ ಜೊತೆ ಈಗಾಗಲೇ ಸಮಾಲೋಚನೆ ನಡೆಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕಾರ್ಯಪಡೆ ಜೊತೆ ವ್ಯವಹರಿಸಲು ಅವರೇ ಸೂಕ್ತ' ಎಂದು ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದರು.
'ಸಂಸ್ಥೆಗೆ ಯಾರೊಬ್ಬರೂ ಅನಿವಾರ್ಯವಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅವರ ಮುಂದುವರಿಕೆ ಅಗತ್ಯ. ರಾಜಕೀಯ ಪಕ್ಷವೊಂದರ ನಾಯಕರು ಪಿಐಎಲ್ ಸಲ್ಲಿಸಿರುವುದಕ್ಕೆ ನಮ್ಮ ಆಕ್ಷೇಪವಿದೆ. ಆ ಪಕ್ಷದ ಹಿರಿಯ ಮುಖಂಡರೊಬ್ಬರ ವಿರುದ್ಧ ಇ.ಡಿ ತನಿಖೆ ನಡೆಸುತ್ತಿದೆ' ಎಂದು ಹೇಳಿದರು.
ಅವರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, 'ವ್ಯಕ್ತಿಯೊಬ್ಬರು ರಾಜಕೀಯ ಪಕ್ಷವೊಂದರ ಸದಸ್ಯ ಎಂಬ ಕಾರಣಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನಿರಾಕರಿಸಬೇಕೆ? ಅವರು ನ್ಯಾಯಾಲಯದ ಮೊರೆ ಹೋಗುವುದನ್ನು ತಡೆಯಬಹುದೇ' ಎಂದು ಪ್ರಶ್ನಿಸಿತು. ವಿಚಾರಣೆಯನ್ನು ಇದೇ 8ಕ್ಕೆ ಮುಂದೂಡಿತು.