ಕೊಟ್ಟಾಯಂ: ರೂಮಿನಲ್ಲಿ ಕೂಡಿ ಹಾಕಿದ ಪತ್ನಿಯನ್ನು ಬಿಡಿಸಲು ಬಂದ ಪೊಲೀಸ್ ಅಧಿಕಾರಿಯ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ.
ಜಿಬಿನ್ ಲೋಬೋ, ಹಲ್ಲೆಗೊಳಗಾದ ಪಾಂಪಡಿ ಪೊಲೀಸ್ ಠಾಣೆಯ ಸೀನಿಯರ್ ಸಿವಿಲ್ ಪೊಲೀಸ್ ಅಧಿಕಾರಿ.
ಮತ್ತಷ್ಟು ಟೀಕೆ
ಪೊಲೀಸರು ಅನಿರೀಕ್ಷಿತ ದಾಳಿಗಳನ್ನು ತಡೆಯಲು ಶಕ್ತರಲ್ಲ ಮತ್ತು ಅದಕ್ಕೆ ತರಬೇತಿ ಪಡೆದಿಲ್ಲ ಎಂಬ ಟೀಕೆಗಳ ನಡುವೆಯೇ ಈ ಘಟನೆ ನಡೆದಿರುವುದು ಪೊಲೀಸರ ಮೇಲಿನ ಮತ್ತಷ್ಟು ಟೀಕೆಗೆ ಪ್ರಚೋದನೆ ನೀಡಿದಂತಿದೆ.
ಠಾಣೆಗೆ ಕರೆ ಮಾಡಿ ದೂರು
ಭಾನುವಾರ (ಮೇ 14) ರಾತ್ರಿ 10.15ರ ಸುಮಾರಿಗೆ ಪಂಪಾಡಿಯ ವೆಲ್ಲೂರು 8ನೇ ಮೈಲಿನಲ್ಲಿ ಈ ಘಟನೆ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನನ್ನನ್ನು ರೂಮಿನಲ್ಲಿ ಕೂಡಿ ಹಾಕಿ, ಬೀಗ ಹಾಕಲಾಗಿದೆ ಎಂದು ಆರೋಪಿ ಸ್ಯಾಮ್ ಅವರ ಪತ್ನಿ, ಪಂಪಾಡಿ ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ನೀಡಿದ್ದರು. ಕೂಡಲೇ ಗ್ರೇಡ್ ಎಸ್‌ಐ ರಾಜೇಶ್, ಎಸ್‌ಸಿಪಿಒ ಜಿಬಿನ್ ಮತ್ತು ಹೋಂಗಾರ್ಡ್ ಜಯಕುಮಾರ್ ಮನೆಗೆ ತಲುಪಿದರು.
ಸ್ಥಳದಿಂದ ಪರಾರಿ
ಈ ವೇಳೆ ಪೊಲೀಸ್ ಅಧಿಕಾರಿ ಮಹಿಳೆಯನ್ನು ಕೂಡಿ ಹಾಕಿದ್ದ ಕೊಠಡಿಯ ಬಾಗಿಲು ತೆರೆಯಲು ಯತ್ನಿಸುತ್ತಿದ್ದಾಗ ಆರೋಪಿ ಸ್ಯಾಮ್, ಜಿಬಿನ್ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಆರೋಪಿ, ರಾಜೇಶ್ ಮತ್ತು ಜಯಕುಮಾರ್ ಅವರನ್ನು ತಳ್ಳಿ ಸ್ಥಳದಿಂದ ಪರಾರಿಯಾಗಿದ್ದಾರೆ. ಮಂತುರುತಿಯ ಚಂಪಕ್ಕರ ಮೂಲದ ಪೊಲೀಸ್ ಅಧಿಕಾರಿ ಜಿಬಿನ್ ಅವರ ಕಣ್ಣಿನ ರೆಪ್ಪೆಯ ಮೇಲೆ ಗಾಯವಾಗಿದ್ದು, ನಾಲ್ಕು ಹೊಲಿಗೆಗಳನ್ನು ಹಾಕಲಾಗಿದೆ.
ಮೊದಲ ಪತಿಯಿಂದ ವಿಚ್ಛೇದನ
ಆರೋಪಿಯ ಪತ್ನಿಯ ಹೆಸರು ಬಿನಿ. ಈಕೆ ತನ್ನ ಮೊದಲ ಪತಿಯಿಂದ ವಿಚ್ಛೇದನ ಪಡೆದ ನಂತರ ಎರಡು ವರ್ಷಗಳ ಹಿಂದೆ ಸ್ಯಾಮ್ನನ್ನು ವಿವಾಹವಾದಳು. ಆಕೆಗೆ ಮೊದಲ ಪತಿಯಿಂದ ಮೂವರು ಮಕ್ಕಳಿದ್ದಾರೆ. ಯಾವುದೇ ಮಕ್ಕಳನ್ನು ಮನೆಗೆ ಕರೆತರುವುದಿಲ್ಲ ಎಂಬ ಷರತ್ತಿನ ಮೇಲೆ ಸ್ಯಾಮ್, ಬಿನಿಯನ್ನು ಮದುವೆಯಾದಳು.
ನ್ಯಾಯಾಲಯದಿಂದ ರಕ್ಷಣೆ ಆದೇಶ
ಆದರೆ, ಇತ್ತೀಚೆಗೆ ಬಿನಿ, ತನ್ನ ಮೂರನೇ ಮಗನಿಗೆ ಅನಾರೋಗ್ಯ ಕಾರಣ ಮನೆಗೆ ಕರೆತಂದಾಗ ಗಂಡ-ಹೆಂಡತಿ ನಡುವೆ ಸಮಸ್ಯೆಗಳು ಪ್ರಾರಂಭವಾದವು. ತನ್ನನ್ನು ಮನೆಯಿಂದ ಹೊರಹಾಕದಂತೆ ನ್ಯಾಯಾಲಯದಿಂದ ರಕ್ಷಣೆ ಆದೇಶವನ್ನು ಬಿನಿ ಪಡೆದಿದ್ದರು. ಆದರೂ ಆಕೆಗೆ ಆತ ಹಿಂಸೆ ಕೊಡುತ್ತಿದ್ದ. ಆರೋಪಿ ಸ್ಯಾಮ್ ಕೊಲೆ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.