ತಿರುವನಂತಪುರ: ಎಲ್ಲ ಪೊಲೀಸ್ ಜಿಲ್ಲೆಗಳಲ್ಲಿ (ಪೋಲೀಸ್ ಪಡೆಗಳು ಗಸ್ತು ತಿರುಗುವ ಭೌಗೋಳಿಕ ಪ್ರದೇಶಗಳ ವಿಭಾಗದ ಒಂದು ರೂಪ) ಡ್ರೋನ್ ಕಣ್ಗಾವಲು ವ್ಯವಸ್ಥೆ ಹೊಂದಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ.
ಗುರುವಾರ ಇಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಎಲ್ಲ ಪೊಲೀಸ್ ಜಿಲ್ಲೆಗಳಿಗೂ ಡ್ರೋನ್‌ಗಳನ್ನು ವಿತರಿಸಿ, ವಿಶೇಷ ತರಬೇತಿ ಪಡೆದ ಡ್ರೋನ್ ಪೈಲಟ್‌ಗಳಿಗೆ ಚಾಲನಾ ಪರವಾನಗಿ ಪತ್ರ ನೀಡಿದರು.
ಇದೇ ವೇಳೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಡ್ರೋನ್ ವಿರೋಧಿ ತಂತ್ರಜ್ಞಾನವನ್ನೂ ಅನಾವರಣಗೊಳಿಸಿದ ಪಿಣರಾಯಿ ಅವರು, 'ಪೊಲೀಸ್ ಪಡೆಯನ್ನು ಆಧುನೀಕರಣಗೊಳಿಸುವುದರಲ್ಲಿ ಕೇರಳ ಮುಂಚೂಣಿಯಲ್ಲಿದೆ. ಹಾಗೆಯೇ, ಡ್ರೋನ್‌ಗಳ ಬಳಕೆ ಹೆಚ್ಚಾಗುತ್ತಿರುವ ಸಮಾಜದಲ್ಲಿ ಡ್ರೋನ್ ವಿರೋಧಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದೂ ಸಹ ಮುಖ್ಯವಾಗಿದೆ' ಎಂದರು.
'ಈಗಾಗಲೇ ತರಬೇತಿ ಪಡೆದಿರುವ ಡ್ರೋನ್ ಪೈಲಟ್‌ಗಳು, ತಮ್ಮ ಸಹೋದ್ಯೋಗಿಗಳಿಗೆ ತಾವು ಕಲಿತ ವಿದ್ಯೆಯ ಕುರಿತು ವಿವರಿಸಬೇಕು' ಎಂದೂ ಅವರು ಕೋರಿದರು.
ಬಳಿಕ ಮಾತನಾಡಿದ ಕೇರಳದ ಸೈಬರ್‌ಡೊಮ್‌ನ ಪ್ರಮುಖಾಧಿಕಾರಿಯೂ ಆಗಿರುವ ಪೊಲೀಸ್ ಮಹಾನಿರ್ದೇಶಕ ಪಿ. ಪ್ರಕಾಶ್, 'ಈ ಡ್ರೋನ್‌ಗಳನ್ನು ಕಾನೂನು ಮತ್ತು ಸುವ್ಯವಸ್ಥೆಗಾಗಿ ಹಾಗೂ ವಿಪತ್ತು ನಿರ್ವಹಣಾ ಸಂದರ್ಭದಲ್ಲಿ ಬಳಸಲಾಗುತ್ತದೆ. ಕಠಿಣ ಸಂದರ್ಭಗಳಲ್ಲಿ ಹಾಗೂ ದುರ್ಗಮ ಪ್ರದೇಶಗಳಲ್ಲಿ ಬಳಕೆ ಮಾಡಲು ನಮ್ಮ ಡ್ರೋನ್‌ಗಳು ಸಹಾಯಕವಾಗುತ್ತವೆ. ಈ ನಿಟ್ಟಿನಲ್ಲಿ ನಮ್ಮ ಸಿಬ್ಬಂದಿಗೆ ವಿಶೇಷ ತರಬೇತಿ ಕೊಡಿಸಲಾಗಿದೆ' ಎಂದರು.
'ದುರುದ್ದೇಶಪೂರಿತ ಡ್ರೋನ್‌ಗಳ ಗುರುತಿಸುವಿಕೆ ಹಾಗೂ ಅವುಗಳು ಕ್ರೋಡೀಕರಿಸಿಕೊಂಡಿರುವ ಮಾಹಿತಿಯನ್ನು ಪತ್ತೆಹಚ್ಚಿ ವಿಶ್ಲೇಷಿಸುವಿಕೆಯ ಕಾರ್ಯವನ್ನು ಡ್ರೋನ್ ವಿಧಿವಿಜ್ಞಾನ ಪ್ರಯೋಗಾಲಯ ಮಾಡುತ್ತದೆ' ಎಂದು ಅವರು ವಿವರಿಸಿದರು.
'ಹಾಗೆಯೇ ಡ್ರೋನ್ ವಿರೋಧಿ ತಂತ್ರಜ್ಞಾನವು 5 ಕಿ.ಮೀ ವ್ಯಾಪ್ತಿಯಲ್ಲಿನ ಯಾವುದೇ ಡ್ರೋನ್ ಅನ್ನು ಪತ್ತೆಹಚ್ಚಿ ನಾಶಗೊಳಿಸುವ ಅಥವಾ ವಶಪಡಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದು ಸ್ಥಳೀಯವಾಗಿ ಅಭಿವೃದ್ಧಿಗೊಂಡ ತಂತ್ರಜ್ಞಾನವಾಗಿದ್ದು, ಈ ಬಗ್ಗೆ ನಮಗೆ ಹೆಮ್ಮೆ ಇದೆ' ಎಂದೂ ಅವರು ಮಾಹಿತಿ ನೀಡಿದರು.
25 ಪೊಲೀಸ್ ಸಿಬ್ಬಂದಿಗೆ ವಿಶೇಷ ತರಬೇತಿ
ಡ್ರೋನ್ ಕುರಿತ ವಿಶೇಷ ತರಬೇತಿ ಪಡೆಯಲು ಕೇರಳವು ತನ್ನ 25 ಪೊಲೀಸ್ ಸಿಬ್ಬಂದಿಯನ್ನು ಮದ್ರಾಸ್‌ನ ಐಐಟಿಗೆ ಕಳುಹಿಸಿತ್ತು. ಅಲ್ಲದೆ ಇತರ 20 ಸಿಬ್ಬಂದಿಗೆ ಕೇರಳದ ಡ್ರೋನ್ ಪ್ರಯೋಗಾಲಯದಲ್ಲಿ ಡ್ರೋನ್ ಕುರಿತ ಪ್ರಾಥಮಿಕ ತರಬೇತಿ ನೀಡಲಾಗಿದೆ. ಪ್ರಾರಂಭದಲ್ಲಿ 20 ಪೊಲೀಸ್ ಜಿಲ್ಲೆಗಳಲ್ಲಿ ಡ್ರೋನ್ ಕಣ್ಗಾವಲು ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಪ್ರತಿ ಜಿಲ್ಲೆಗೂ ಒಂದೊಂದು ಡ್ರೋನ್ ನೀಡಲಾಗಿತ್ತು. ರಾಜ್ಯಹಂತದಲ್ಲಿ ಡ್ರೋನ್ ವಿಧಿ ವಿಜ್ಞಾನ ಪ್ರಯೋಗಾಲಯ ಅಭಿವೃದ್ಧಿಪಡಿಸಿದ ಹಾಗೂ ಡ್ರೋನ್ ವಿರೋಧಿ ವ್ಯವಸ್ಥೆ ಜಾರಿಗೆ ತಂದ ಕೀರ್ತಿ ಕೇರಳಕ್ಕೆ ಸಲ್ಲುತ್ತದೆ.