ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರ ವಿರುದ್ಧ ತೋರುವ ನಿರ್ಲಕ್ಷ್ಯ ಧೋರಣೆಯನ್ನು ಕೇರಳದ ಎಡರಂಗ ಸರ್ಕಾರ ಕೊನೆಗೊಳಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯೆ ಪ್ರಮೀಳಾ ಸಿ ನಾಯ್ಕ್ ತಿಳಿಸಿದ್ದಾರೆ.
ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿ ಸಭಾಂಗಣದಲ್ಲಿ ನಡೆದ ಪಕ್ಷದ ಜಿಲ್ಲಾ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಹನ್ನೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಎಂಡೋಸಲ್ಫಾನ್ ಕರಾಳಛಾಯೆ ಹರಡಿದ್ದು, ಈ ಪ್ರದೇಶದ ಬಹುತೆಕ ಮಂದಿಯ ಹೆಸರು ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಸರ್ಕಾರ ಈ ಹಿಂದೆ ನೀಡುತ್ತಿದ್ದ ಚಿಕಿತ್ಸಾ ಸೌಲಭ್ಯ ಕ್ಯಬಿಟ್ಟಿದೆ. ಪ್ರಸಕ್ತ ಉಕ್ಕಿನಡ್ಕ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲೂ ಚಿಕಿತ್ಸೆ ಕೈಬಿಡುವ ಮೂಲಕ ಸಂತ್ರಸ್ತರನ್ನು ಕಡೆಗಣಿಸುತ್ತಿದೆ. ಪುನರ್ವಸತಿ ಕಾಮಗಾರಿಯೂ ಸ್ಥಗಿತಗೊಂಡಿದೆ. ಸಂತ್ರಸ್ತರ ಪಟ್ಟಿಯಿಂದ ಬಹುತೇಕ ಮಂದಿಯ ಹೆಸರನ್ನೂ ಕೈಬಿಟ್ಟಿದೆ. ಸರ್ಕಾರ ಇಂತಹ ನ್ಯಾಯ ನಿರಾಕರಣೆಯನ್ನು ನಿಲ್ಲಿಸಿ ಕೂಡಲೇ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರವಿಶ ತಂತ್ರಿ ಕುಂಟಾರು ಅಧ್ಯಕ್ಷ ತೆ ವಹಿಸಿದ್ದರು. ರಾಜ್ಯ ಸಮಿತಿ ಕಾರ್ಯದರ್ಶಿ ವಕೀಲ ಕೆ.ಪಿ.ಪ್ರಕಾಶ್ ಬಾಬು, ಉತ್ತರ ಪ್ರಾಂತ ಸಂಘಟನಾ ಕಾರ್ಯದರ್ಶಿ ಜಿ.ಕಾಶಿನಾಥ್, ರಾಜ್ಯ ಸಮಿತಿ ಸದಸ್ಯರಾದ ಸತೀಶ್ಚಂದ್ರ ಭಂಡಾರಿ, ವಕೀಲ ವಿ. ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಎ. ವೇಲಾಯುಧನ್ ಸ್ವಾಗತಿಸಿದರು. ವಿಜಯಕುಮಾರ್ ವಂದಿಸಿದರು.