ಕೊಚ್ಚಿ: ಎಲತ್ತೂರು ರೈಲಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎಯಿಂದ ಸಮನ್ಸ್ ಪಡೆದಿದ್ದ ದೆಹಲಿಯ ಶಹೀನ್‌ಬಾಗ್ ನಿವಾಸಿಯ ತಂದೆ ಮುಹಮ್ಮದ್ ಶಫೀಕ್ (46) ಎಂಬ ವ್ಯಕ್ತಿ ಇಲ್ಲಿನ ಹೋಟೆಲ್ ಕೊಠಡಿಯಲ್ಲಿ ನಿಗೂಢವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಕೊಚ್ಚಿ: ಎಲತ್ತೂರು ರೈಲಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎಯಿಂದ ಸಮನ್ಸ್ ಪಡೆದಿದ್ದ ದೆಹಲಿಯ ಶಹೀನ್‌ಬಾಗ್ ನಿವಾಸಿಯ ತಂದೆ ಮುಹಮ್ಮದ್ ಶಫೀಕ್ (46) ಎಂಬ ವ್ಯಕ್ತಿ ಇಲ್ಲಿನ ಹೋಟೆಲ್ ಕೊಠಡಿಯಲ್ಲಿ ನಿಗೂಢವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಇದು ಆತ್ಮಹತ್ಯೆಯಾಗಿರಬೇಕು ಎಂದು ಶಂಕಿಸಿರುವ ಎರ್ನಾಕುಲಂ ಪೊಲಿಸರು, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಏಪ್ರಿಲ್ 2ರಂದು ಕಲ್ಲಿಕೋಟೆಯಲ್ಲಿ ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಮೂವರು ಮೃತಪಟ್ಟು, ಒಂಬತ್ತು ಮಂದಿಗೆ ಸುಟ್ಟ ಗಾಯಗಳಾಗಿದ್ದವು.
ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಶಫೀಕ್ ತಮ್ಮ ಮಗ ಮುಹಮ್ಮದ್ ಮೋನಿಸ್ (26) ಜತೆಗೆ ಕೊಚ್ಚಿನ್‌ಗೆ ಆಗಮಿಸಿ, ಮಂಗಳವಾರ ಹೋಟೆಲ್ ರೂಂ ಪಡೆದಿದ್ದರು. ಪ್ರಕರಣದ ಏಕೈಕ ಆರೋಪಿ ಶಾರೂಖ್ ಸೈಫಿ ಎಂಬಾತನ ಸಹಪಾಠಿಯಾಗಿದ್ದ ಮೋನಿಸ್ ಜತೆ ಆರೋಪಿ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈ ಅಪರಾಧವನ್ನು ಎಸಗಲು ಸೈಫಿಗೆ ಯಾರಾದರೂ ಪ್ರಭಾವ ಬೀರಿದ್ದಾರೆಯೇ ಎಂದು ಪತ್ತೆ ಹಚ್ಚಲು ವಿಚಾರಣೆಗೆ ಹಾಜರಾಗುವಂತೆ ಎನ್‌ಐಎ ಅಧಿಕಾರಿಗಳು ಮೋನಿಸ್‌ಗೆ ಸಮನ್ಸ್ ನೀಡಿದ್ದರು.
ತಂದೆ- ಮಗ ಕೊಚ್ಚಿಗೆ ಆಗಮಿಸಿದ ಬಳಿಕ ಎನ್‌ಐಎ ಅಧಿಕಾರಿಗಳು ಹಲವು ಬಾರಿ ಮೋನಿಸ್‌ನನ್ನು ವಿಚಾರಣೆಗೆ ಗುರಿಪಡಿಸಿದ್ದರು. ಆದರೆ ಇದುವರೆಗೂ ಆತನನ್ನು ಪ್ರಕರಣದಲ್ಲಿ ಆರೋಪಿ ಎಂದು ಎನ್‌ಐಎ ಹೆಸರಿಸಿಲ್ಲ.
ಗುರುವಾರ ರಾತ್ರಿ ತಂದೆ ಮತ್ತು ಮಗನನ್ನು ಹೋಟೆಲ್ ಸಿಬ್ಬಂದಿ ನೋಡಿದ್ದಾರೆ. ಮರು ದಿನ ಸಂಜೆ ತಂದೆ ನಾಪತ್ತೆಯಾಗಿರುವ ಬಗ್ಗೆ ಮೋನಿಸ್ ಮಾಹಿತಿ ನೀಡಿ, ಬಾತ್‌ರೂಂ ಒಳಗಿನಿಂದ ಲಾಕ್ ಆಗಿದೆ ಎಂದು ಸಿಬ್ಬಂದಿಗೆ ಹೇಳಿದ್ದಾರೆ. ಬಾಗಿಲು ಮುರಿದು ನೋಡಿದಾಗ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಎನ್‌ಐಎ ಸಮನ್ಸ್ ನೀಡಿದ್ದರಿಂದ ತಂದೆ ಚಿಂತಿತರಾಗಿದ್ದರು ಎಂದು ಮೋನಿಸ್ ಹೇಳಿದ್ದಾರೆ.