ಬದಿಯಡ್ಕ : ಶಿಬಿರಗಳು ಮಕ್ಕಳಲ್ಲಿ ಕಲೆಯ ಬಗೆಗಿನ ಆಸಕ್ತಿಯನ್ನು ಅರಳಿಸುತ್ತದೆ. ಎಲ್ಲಾ ಕಲೆಗಳಿಗೂ ಪ್ರತ್ಯೇಕ ಮಹತ್ವ ಇದೆ. ಪ್ರತಿಯೊಬ್ಬರೂ ಕೂಡಾ ತಮ್ಮ ಆಸಕ್ತಿಯ ಕಲೆಯಲ್ಲಿ ನಿಷ್ಣಾತರಾದರೆ ಸುಕ್ಷೇಮವಾದ ಶಾಂತ ಸಮಾಜದ ನಿರ್ಮಾಣ ಸಾಧ್ಯ. ಕಲಾವಿದರು ಹಾಗೂ ಕಲಾಸಕ್ತರು ಸಾತ್ವಿಕ ಸ್ವಭಾವದವರಾಗಿದ್ದು ಯಾವತ್ತೂ ಕೂಡಾ ಕಲಹಪ್ರಿಯರಾಗಲಾರರು' ಎಂದು ಎಡನೀರು ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಅವರು ವೀಣಾವಾದಿನಿ ಸಂಗೀತ ಸಂಸ್ಥೆಯ ಆಶ್ರಯದಲ್ಲಿ ಬದಿಯಡ್ಕ ಸಮೀಪದ ಪುಳಿತ್ತಡಿಯ ನಾರಾಯಣೀಯಂ ಸಂಗೀತ ಶಾಲೆಯಲ್ಲಿ 'ಗಾನಮಾಧುರ್ಯಂ" ಎಂಬ 3 ದಿನಗಳ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ವಿದ್ವಾನ್ ತಾಮರಕ್ಕುಡಿ ಗೋವಿಂದನ್ ನಂಬೂದರಿಯವರನ್ನು ಶ್ರೀಗಳು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಗೋವಿಂದನ್ ನಂಬೂದರಿ ಅವರು ಭಜನ್ ಹಾಡುವ ಮೂಲಕ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವೀಣಾವಾದಿನಿ ಸಂಸ್ಥೆಯ ಸಾಧಕ ಸನ್ಮಾನವನ್ನು ಸಂಸ್ಕøತ ವಿದ್ವಾಂಸರಾದ ಡಾ. ರಾಧಾಕೃಷ್ಣ ಬಿ ಅವರಿಗೆ ನೀಡಲಾಯಿತು. ಪ್ರಶಸ್ತಿಗೆ ಕೃತಜ್ಞತೆ ಸಲ್ಲಿಸಿದ ಡಾ. ರಾಧಾಕೃಷ್ಣ ಅವರು ಮಾತನಾಡಿ,' ಸಂಸ್ಕøತ ಭಾಷೆಯು ಇತಿಹಾಸದಲ್ಲಿದ್ದಷ್ಡೇ ಶ್ರೀಮಂತವಾಗಿ ಈಗಲೂ ಇದೆ. ಮುಂದೆಯೂ ಇರುತ್ತದೆ. ಶಾಸ್ತ್ರಪರಂಪರೆಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ' ಎಂದು ಹೇಳಿದರು.
ಸನ್ಮಾನ ಪತ್ರವನ್ನು ಸನ್ನಿಧಿ ವಾಚಿಸಿದರು. ಕಾರ್ಯಕ್ರಮದಲ್ಲಿ ವಿಣಾವಾದಿನಿ ಸಂಗೀತ ಶಾಲೆಯ ಮಂದಿನ ಯೋಜನೆಗಳ ಕರಪತ್ರವನ್ನು ಶ್ರೀಗಳು ಬಿಡುಗಡೆ ಮಾಡಿದರು. ಶಿಬಿರಾರ್ಥಿಗಳೆಲ್ಲರಿಗೂ ಶಾಲು ಹೊದಿಸಿ, ಮಂತ್ರಾಕ್ಷತೆ ನೀಡಿ ಎಡನೀರು ಶ್ರೀಗಳು ಆಶೀರ್ವದಿಸಿದರು. ರಮ್ಯಾ ಬಳ್ಳಪದವು ಸಹಕರಿಸಿದ್ದರು. ವಿದ್ವಾನ್ ಯೋಗೀಶ ಶರ್ಮ ಬಳ್ಳಪದವು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾನ್ ಪ್ರಭಾಕರ ಕುಂಜಾರು ವಂದಿಸಿದರು. ಡಾ. ಮಾಧವಿ ಭಟ್ ಮಂಗಳೂರು ನಿರೂಪಿಸಿದರು. ಶಿಬಿರದಲ್ಲಿ ಅನೇಕ ಮಂದಿ ಸಂಗೀತ ವಿದ್ಯಾರ್ಥಿಗಳು ಭಾಗವಹಿಸಿದ್ದರು.