ಕಾಸರಗೋಡು: ಪಿಣರಾಯಿ ವಿಜಯನ್ ನೇತೃತ್ವದ ಎರಡನೇ ಕಾಲಾವಧಿಯ ಎಡರಂಗ ಸರ್ಕಾರವು ಜಾತ್ಯತೀತತೆಯನ್ನು ಅಳವಡಿಸಿಕೊಂಡು, ಭ್ರಷ್ಟಾಚಾರ ಮುಕ್ತ ನವ ಕೇರಳವನ್ನು ನಿರ್ಮಿಸುವಲ್ಲಿ ದೇಶಕ್ಕೆ ಮಾದರಿಯಾಗಿದೆ ಎಂದು ವಸ್ತುಸಂಗ್ರಹಾಲಯ ಮತ್ತು ಪ್ರಾಚ್ಯವಸ್ತು ಖಾತೆ ಸಚಿವ ಅಹ್ಮದ್ ದೇವರ್ ಕೋವಿಲ್ ತಿಳಿಸಿದ್ದಾರೆ.
ಅವರು ರಾಜ್ಯ ಸರ್ಕಾರದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಕಾಞಂಗಾಡಿನ ಅಲಾಮಿಪಲ್ಲಿಯಲ್ಲಿ ನಡೆದ ಮೈ ಕೇರಳ ವಸ್ತುಪ್ರದರ್ಶನ ಮತ್ತು ಮಾರುಕಟ್ಟೆ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರದ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಗಳಿಗೆ ಸಮಾನ ಆದ್ಯತೆ ನೀಡಿ ಮುನ್ನಡೆಯುತ್ತಿದೆ. ವಿವಿಧ ಕ್ಷೇತ್ರಗಳ ಅಭಿವೃದ್ಧಿ ಜತೆಗೆ ಸಮುದಾಯದ ಕಲ್ಯಾಣಕ್ಕೂ ಒತ್ತು ನೀಡಬಲ್ಲದು ಎಂಬುದನ್ನು ಕಾರ್ಯದ ಮೂಲಕ ಸಾಬೀತುಪಡಿಸಿದೆ. ರಾಷ್ಟ್ರೀಯ ಹೆದ್ದಾರಿ, ಮಲೆನಾಡು ಹೆದ್ದಾರಿ ಮತ್ತು ವಿಯಿಞ ಬಂದರು ಯೋಜನೆ ಅತಿಶೀಘ್ರ ನನಸಾಗುವ ಹಂತದಲ್ಲಿದೆ ಎಂದು ತಿಳಿಸಿದರು.
ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಂ.ರಾಜಗೋಪಾಲನ್, ಸಿ.ಎಚ್.ಕುಞಂಬು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಮುಖ್ಯ ಅತಿಥಿಗಳಾಗಿದ್ದರು. ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್, ಜಿಲ್ಲಾ ಕೇರಳ ಸಹಕಾರಿ ಠೇವಣಿ ಖಾತ್ರಿ ನಿಧಿ ಮಂಡಳಿ ಉಪಾಧ್ಯಕ್ಷ ಕೆ.ಪಿ.ಸತೀಶ್ ಚಂದ್ರನ್ ಪ್ರಭಾರ ಎಡಿಎಂ ನವೀನ್ ಬಾಬು, ಎಲ್ ಎಸ್ ಜಿಡಿ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ, ಕಾಞಂಗಾಡ್ ಡಿವೈಎಸ್ ಪಿ ಪಿ.ಬಾಲಕೃಷ್ಣನ್ ನಾಯರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ.ಸಜಿತ್ ಕುಮಾರ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಉಪಸ್ಥಿತರಿದ್ದರು. ಕಾಞಂಗಾಡ್ ನಗರಸಭಾ ಸದಸ್ಯ ವಿ.ವಿ.ರಮೇಶನ್, ಗ್ರಾಮ ಪಂಚಾಯಿತಿ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ.ವತ್ಸಲನ್, ನೀಲೇಶ್ವರಂ ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ, ರಾಷ್ಟ್ರೀಯ ಪಕ್ಷ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಮೈ ಕೇರಳ ವಸ್ತುಪ್ರದರ್ಶನ ಮತ್ತು ಮಾರುಕಟ್ಟೆ ಮೇಳದ ಆಯೋಜನಾ ಸಮಿತಿಯ ಅಧ್ಯಕ್ಷೆ ಹಾಗೂ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಸ್ವಾಗತಿಸಿದರು. ಸಂಘಟನಾ ಸಮಿತಿಯ ಪ್ರಧಾನ ಸಂಚಾಲಕ ಹಾಗೂ ಜಿಲ್ಲಾ ಶಿಶುಪಾಲನಾ ಅಧಿಕಾರಿ ಎಂ.ಮಧುಸೂದನನ್ ವಂದಿಸಿದರು.
ಈ ಸಂದರ್ಭ ರಾಜ್ಯ ಸರ್ಕಾರದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಕಾಞಂಗಾಡ್‍ನ ಅಲಮಿಪಲ್ಲಿಯಲ್ಲಿ ಮೈ ಕೇರಳ ಎಕ್ಸಿಬಿಷನ್ ಮತ್ತು ಮಾರ್ಕೆಟಿಂಗ್ ಮೇಳ 2023ನ್ನು ಸಚಿವ ಅಹ್ಮದ್ ದೇವರ್ ಕೋವಿಲ್ ಉದ್ಘಾಟಿಸಿದರು.
ಗಮನಸೆಳೆದ ಮೇಳಗಳು:
ಮಾರುಕಟ್ಟೆ ಮೇಳ ಅಂಗವಾಗಿ ನಾನಾ ಮಳಿಗೆಗಳನ್ನು ಆಯೋಜಿಸಲಾಗಿತ್ತು. ಕೈಗಾರಿಕೆ ಮತ್ತು ವಿವಿಧ ಇಲಾಖೆಗಳ ಥೀಮ್ ಸ್ಟಾಲ್ ಗಳು, ಪ್ರವಾಸೋದ್ಯಮ ಮೇಳ, ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತುಪ್ರದರ್ಶನ, ಆಹಾರ ಮೇಳ ಮತ್ತು ಸೇವಾ ಮಳಿಗೆಗಳು ಮೇಳದ ಪ್ರಮುಖ ಆಕರ್ಷಣೆಗಳಾಗಿವೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ಆಕರ್ಷಕ ಮೆರವಣಿಗೆ ನಡೆಯಿತು. ಚೆಂಡೆಮೇಳ, ಸ್ತಬ್ಧ ಚಿತ್ರಗಳು, ಸಮವಸ್ತ್ರಧಾರಿ ಮಹಿಳೆಯರು ಮೆರವಣಿಗೆಗೆ ಮೆರಗು ನೀಡಿದರು.