ಭೋಪಾಲ್: ಮಧ್ಯಪ್ರದೇಶ ಪೊಲೀಸರು ವಿಚಿತ್ರ ಪ್ರಕರಣವನ್ನು ದಾಖಲಿಸಿದ್ದಾರೆ. ಇಲ್ಲಿ ಅಧಿಕಾರಿಗಳು 26 ಜೀವಂತ ಕಾರ್ಮಿಕರು ಸತ್ತಿದ್ದಾರೆ ಎಂದು ಘೋಷಿಸುವ ಮೂಲಕ ಸರ್ಕಾರದ ಹಣಕಾಸಿನ ನೆರವನ್ನು ದುರುಪಯೋಗಪಡಿಸಿಕೊಂಡಿದ್ದರು.
ಶಿವಪುರಿ ಜನಪದ್ ಪಂಚಾಯತ್‌ನಲ್ಲಿ ಐವರು ಅಧಿಕಾರಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಿಂದ ನೋಂದಾಯಿತ ಕಾರ್ಮಿಕರಿಗೆ ನೀಡಲಾಗುವ ಅಂತ್ಯಕ್ರಿಯೆ ಮತ್ತು ಎಕ್ಸ್ ಗ್ರೇಷಿಯಾ ನೆರವಿನಲ್ಲಿ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ಜೀವಂತ ಕೂಲಿ ಕಾರ್ಮಿಕರು ಸತ್ತಿದ್ದಾರೆ ಎಂದು ತೋರಿಸಿ ಅವರು ಸರ್ಕಾರದ ನಿಧಿಯಿಂದ 93.56 ಲಕ್ಷ ರೂಪಾಯಿ ಪಡೆದಿದ್ದಾರೆ.
ಜಿಲ್ಲಾ ಪಂಚಾಯಿತಿ ಸಿಇಒ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯ ತನಿಖಾ ವರದಿಯಲ್ಲಿ ಅಧಿಕಾರಿಗಳು 26 ಫಲಾನುಭವಿಗಳ ಹೆಸರುಗಳ ಪಟ್ಟಿಯನ್ನು ನೆಪ ಮಾಡಿಕೊಂಡಿರುವುದು ಬಯಲಾಗಿದೆ. ಜಿಲ್ಲೆಯ ಇಬ್ಬರು ಸಿಇಒಗಳ ಡಿಜಿಟಲ್ ಸಹಿ ಬಳಸಿ ಮೊತ್ತವನ್ನು ಹಿಂಪಡೆಯಲಾಗಿದೆ. ಸಂಬಂಧಪಟ್ಟ ಶಾಖೆಯ ಇಬ್ಬರು ಮಹಿಳಾ ಗುಮಾಸ್ತರು ಸಹ ಈ ವಿಷಯದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.
ಸಿಟಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕಂಪ್ಯೂಟರ್ ಆಪರೇಟರ್, ಇಬ್ಬರು ಜಿಲ್ಲಾ ಸಿಇಒಗಳು ಮತ್ತು ಇಬ್ಬರು ಮಹಿಳಾ ಗುಮಾಸ್ತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಶಿವಪುರಿ ಜಿಲ್ಲೆಯ ಪ್ರಸ್ತುತ ಸಿಇಒ ಗಿರಿರಾಜ್ ಶರ್ಮಾ ಅವರು ಪೊಹ್ರಿ ಜಿಲ್ಲೆಯ ಸಿಇಒ ಗಗನ್ ಬಾಜ್‌ಪೇಯ್ ವಿರುದ್ಧ ಕೊತ್ವಾಲಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.