ಹೈದರಾಬಾದ್: 'ಮಿಷನ್ ಭಗೀರಥ' ಯೋಜನೆಯ ಮೂಲಕ ಶೇ 100ರಷ್ಟು ಮನೆಗಳಿಗೆ ಶುದ್ಧೀಕರಿಸಿದ ನೀರನ್ನು ನಲ್ಲಿಗಳ ಮೂಲಕ ಪೂರೈಕೆ ಮಾಡುವ ಏಕೈಕ ರಾಜ್ಯ ತೆಲಂಗಾಣ ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಶುಕ್ರವಾರ ಹೇಳಿದರು.
ತೆಲಂಗಾಣ ರಚನೆಯಾದ ಹತ್ತನೇ ವರ್ಷಾಚರಣೆಯ ಅಂಗವಾಗಿ ಹೈದರಾಬಾದ್‌ನ ಸೆಕ್ರೆಟೇರಿಯೆಟ್‌ನಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ರಚನೆಯಾದ ಆರಂಭದ ದಿನಗಳನ್ನು ಸ್ಮರಿಸಿದರು.
'ಒಂದು ವೇಳೆ ಶುದ್ಧೀಕರಿಸಿದ ನೀರನ್ನು ಮನೆ ಮನೆಗಳಿಗೆ ಪೂರೈಸಲು ಸಾಧ್ಯವಾಗದಿದ್ದರೆ ನಾನು ಅವರಲ್ಲಿ ಮತಯಾಚನೆ ಮಾಡುತ್ತಿರಲಿಲ್ಲ' ಎಂದ ಅವರು, 'ನಾನು ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇನೆ' ಎಂದರು.
'ಪ್ರತಿ ಮನೆಗೂ ಶುದ್ಧ ಕುಡಿಯುವ ನೀರನ್ನು ಪೂರೈಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ಮೂರನೇ ಸ್ಥಾನದಲ್ಲಿದೆ' ಎಂದೂ ಅವರು ತಿಳಿಸಿದರು.
'ಕೇಂದ್ರ ಸರ್ಕಾರದ ಜಾರಿಗೊಳಿಸುತ್ತಿರುವ 'ಹರ್ ಘರ್ ಜಲ್' ಯೋಜನೆಯು ನಾವು ಆರಂಭಿಸಿರುವ 'ಮಿಷನ್ ಭಗೀರಥ' ಯೋಜನೆಯ ಅನುಕರಣೆಯಾಗಿದೆ. ಆದರೆ, ಆ ಯೋಜನೆಯು ಶೇ 100ರ ಗುರಿ ತಲುಪಿಲ್ಲ' ಎಂದು ಪ್ರತಿಪಾದಿಸಿದರು.
'ಮಿಷನ್ ಭಗೀರಥ' ಯೋಜನೆಯು ರಾಷ್ಟ್ರೀಯ ಜಲ ಮಿಷನ್ ಮತ್ತು ಜಲ ಜೀವನ್ ಪ್ರಶಸ್ತಿಯನ್ನೂ ಪಡೆದುಕೊಂಡಿದೆ' ಎಂದರು.
'ಈಚೆಗೆ ಸುರಿದ ಅಕಾಲಿಕ ಮಳೆಗೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭತ್ತ, ಜೋಳ ಹಾಗೂ ಮಾವಿನ ಬೆಳೆಗಳು ಹಾನಿಗೀಡಾಗಿವೆ. ನಾನು ಅಲ್ಲಿಗೆ ತೆರಳಿ ಸಂಕಷ್ಟಕ್ಕಿಡಾದ ರೈತರಿಗೆ ಧೈರ್ಯ ತುಂಬಿದ್ದೇನೆ. ಸರ್ಕಾರವು ಕೂಡಲೇ ಪ್ರತಿ ಎಕರೆಗೆ ₹ 10 ಸಾವಿರ ಪರಿಹಾರ ಘೋಷಿಸಿದೆ' ಎಂದು ರಾವ್ ಅವರು ಹೇಳಿದರು.
ಧಾನ್ಯ ಉತ್ಪಾದನೆಯಲ್ಲಿ 15ನೇ ಸ್ಥಾನದಲ್ಲಿದ್ದ ತೆಲಂಗಾಣ ಈಗ ದೇಶದಲ್ಲೇ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದೆ ಎಂದೂ ವಿವರಿಸಿದರು. ರಾಜ್ಯದ ಗ್ರಾಮಗಳು ಮತ್ತು ನಗರಗಳು ಮೂಲಸೌಕರ್ಯ, ಸ್ವಚ್ಛತೆ ಮತ್ತು ಹಸಿರಿನಿಂದ ಕಂಗೊಳಿಸುತ್ತಿವೆ. ಪ್ರಬಲವಾದ ಕಾನೂನು, ಸಮಗ್ರ ಯೋಜನೆ, ಸಮರೋಪಾದಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಿದ ಕಾರಣ ಇಂತಹ ಗಮನಾರ್ಹ ಬದಲಾವಣೆ ಸಾಧ್ಯವಾಗಿದೆ ಎಂದು ಬಣ್ಣಿಸಿದರು.
2014ಕ್ಕಿಂತ ಹಿಂದೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅವುಗಳ ಜವಾಬ್ದಾರಿಗಳು ಮತ್ತು ಕೆಲಸಗಳ ಬಗ್ಗೆ ಸರಿಯಾದ ಮಾರ್ಗದರ್ಶನವಿರಲಿಲ್ಲ. ನಮ್ಮ ಸರ್ಕಾರವು ನೂತನ ಪಂಚಾಯತ್ ರಾಜ್ ಕಾಯಿದೆ ಮತ್ತು ಮುನ್ಸಿಪಲ್ ಕಾಯಿದೆಯನ್ನು ಪರಿಚಯಿಸುವ ಮೂಲಕ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯವೈಖರಿ ಬದಲಾಗುವಂತೆ ಮಾಡಿದೆ ಎಂದರು.
2018ರಲ್ಲಿ 'ರೈತ ಬಂಧು' ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಇದು ಹೂಡಿಕೆ ವಿಚಾರದಲ್ಲಿ ರೈತರು ಎದುರಿಸುತ್ತಿದ್ದ ತೊಂದರೆಗಳನ್ನು ಪರಿಹರಿಸಲು ಸಹಕಾರಿಯಾಗಿದೆ. ಈ ಯೋಜನೆಯ ಅಡಿಯಲ್ಲಿ ಇದುವರೆಗೆ 10 ಕಂತುಗಳಲ್ಲಿ ₹65 ಸಾವಿರ ಕೋಟಿಗೂ ಹೆಚ್ಚು ಹಣವನ್ನು ನೇರವಾಗಿ 65ಲಕ್ಷ ರೈತರ ಖಾತೆಗಳಿಗೆ ಜಮಾ ಮಾಡಿರುವುದು ಇತಿಹಾಸ ಎಂದೂ ಹೇಳಿದರು.
ತಲಾ ಆದಾಯ ₹3.17 ಲಕ್ಷಕ್ಕೆ ಏರಿಕೆ
ತೆಲಂಗಾಣದ ತಲಾ ಆದಾಯವು ₹1.24 ಲಕ್ಷದಿಂದ ₹3.17 ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ರಾಜ್ಯದ ಒಟ್ಟು ದೇಶಿಯ ಉತ್ಪನ್ನವು (ಜಿಎಸ್‌ಡಿಪಿ) ₹ 5 ಲಕ್ಷ ಕೋಟಿಯಿಂದ ₹13 ಲಕ್ಷ ಕೋಟಿಗೆ ಏರಿದೆ ಎಂದು ಚಂದ್ರಶೇಖರ ರಾವ್ ಅವರು ಹೇಳಿದ್ದಾರೆ. 2014ರಲ್ಲಿ ತೆಲಂಗಾಣದ ತಲಾ ಆದಾಯವು ₹124104 ಇತ್ತು. ಅದು ಇವತ್ತು ₹ 317115ಕ್ಕೆ ಏರಿಕೆಯಾಗಿದೆ ಎಂದೂ ತಿಳಿಸಿದ್ದಾರೆ.