HEALTH TIPS

ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು: ಜೂನ್ 11ಕ್ಕೆ ಸಚಿನ್ ಪೈಲಟ್ ಹೊಸ ಪಕ್ಷ ಘೋಷಣೆ!

               ವದೆಹಲಿ: ರಾಜಸ್ಥಾನ ಕಾಂಗ್ರೆಸ್‌ನ ಭಿನ್ನಮತೀಯ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಅವರು ತಮ್ಮ ತಂದೆ ದಿವಂಗತ ರಾಜೇಶ್‌ ಪೈಲಟ್‌ ಅವರ ಪುಣ್ಯ ತಿಥಿಯ ದಿನವಾದ ಜೂನ್‌ 11ರಂದು 'ಪ್ರಗತಿಶೀಲ ಕಾಂಗ್ರೆಸ್‌' ಎಂಬ ಹೊಸ ಪಕ್ಷ ಘೋಷಿಸುವ ಸಾಧ್ಯತೆ ಇದೆ.

                ರಾಜಸ್ಥಾನ ಕಾಂಗ್ರೆಸ್‌ ಸಮಿತಿಯಲ್ಲಿ ಭುಗಿಲೆದ್ದಿದ್ದ ಭಿನ್ನಮತ ಶಮನಕ್ಕೆ ವಾರದ ಹಿಂದೆಯಷ್ಟೇ ಕಾಂಗ್ರೆಸ್‌ ನಾಯಕರು ಹೊಂದಾಣಿಕೆ ಸೂತ್ರ ರೂಪಿಸಿದ್ದರು. ಆದರೆ ಅದರಿಂದ ಸಮಾಧಾನಗೊಳ್ಳದ ಸಚಿನ್‌ ಪೈಲಟ್‌ ಪಕ್ಷದಿಂದ ಹೊರ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

                                          ಫಲಕೊಡದ ಹೈಕಮಾಂಡ್‌ ಸಂಧಾನ:

               ರಾಜಸ್ಥಾನದಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅಷ್ಟರೊಳಗೆ ರಾಜ್ಯದ ಕಾಂಗ್ರೆಸ್‌ ಸಮಿತಿಯಲ್ಲಿ ಶಾಂತಿ ನೆಲೆಸುವಂತೆ ಮಾಡಲು ಕಾಂಗ್ರೆಸ್‌ ಹೈಕಮಾಂಡ್‌ ಕಸರತ್ತು ನಡೆಸಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಈ ಇಬ್ಬರೂ ನಾಯಕರೊಂದಿಗೆ ಮೇ 29ರಂದು ನಾಲ್ಕು ತಾಸು ಕಾಲ ಚರ್ಚೆ ನಡೆಸಿ ಎಚ್ಚರಿಕೆಯನ್ನೂ ನೀಡಿದ್ದರು. ಅಲ್ಲದೆ ಬಿಜೆಪಿಯನ್ನು ಸೋಲಿಸಲು ಪೈಲಟ್‌ ಮತ್ತು ಗೆಹಲೋತ್ ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ ಎಂದೂ ಘೋಷಿಸಿದ್ದರು.

                ಪೈಲಟ್‌ ಅವರಿಗೆ ಉತ್ತಮ ಅವಕಾಶ ದೊರೆಯಲಿದೆ ಎಂದು ಹೈಕಮಾಂಡ್‌ ಭರವಸೆ ನೀಡಿತ್ತು. ಆದರೆ ಆ ಕುರಿತ ನಿಖರ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಪೈಲಟ್‌ ಅವರಿಗೆ ಅವಕಾಶ ನೀಡಬಾರದು ಮತ್ತು ಅವರು ಪಕ್ಷವನ್ನು ತ್ಯಜಿಸಲಿ ಎಂಬುದು ಗೆಹಲೋತ್‌ ಅವರ ಧೋರಣೆಯಾಗಿತ್ತು ಎಂದು ಮೂಲಗಳು ತಿಳಿಸಿವೆ.

                                              ಬೇಡಿಕೆಗಳ ಪುನರುಚ್ಚರಿಸಿದ ಪೈಲಟ್‌

              ಹೈಕಮಾಂಡ್‌ ಜತೆಗಿನ ಸಭೆಯ ಮರುದಿನವೇ ಪೈಲಟ್‌ ಅವರು, ತಮ್ಮ ಬೇಡಿಕೆಗಳಿಂದ ಹಿಂದೆ ಸರಿಯುವುದಿಲ್ಲ ಎಂದು ಪುನರುಚ್ಚರಿಸಿದರು. ಬಿಜೆಪಿ ನಾಯಕಿ ಮತ್ತು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ತನಿಖೆ ನಡೆಯಬೇಕು, ರಾಜಸ್ಥಾನ ಲೋಕಸೇವಾ ಆಯೋಗದ ಪುನರ್‌ರಚನೆ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನೊಂದಿರುವ ಯುವ ಸಮುದಾಯಕ್ಕೆ ಪರಿಹಾರ ಒದಗಿಸಬೇಕು ಎಂಬ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ ಸೆಪ್ಟೆಂಬರ್‌ನಲ್ಲಿ ಗೆಹಲೋತ್‌ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಪಕ್ಷದ ಅಧ್ಯಕ್ಷರನ್ನಾಗಿಸಲು ಹಾಗೂ ಪೈಲಟ್‌ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಪಕ್ಷ ಉದ್ದೇಶಿಸಿತ್ತು. ಆದರೆ ಇದಕ್ಕೆ ಸಮ್ಮತಿಸದ ಗೆಹಲೋತ್‌ ಮುಖ್ಯಮಂತ್ರಿ ಆಗಿಯೇ ಉಳಿಯಲು ಬಯಸಿದರು.

ಇವರ ಹಾದಿಯಲ್ಲಿ:

                ಒಂದ ವೇಳೆ ಪೈಲಟ್‌ ಅವರು ಅಂತಿಮವಾಗಿ ಪಕ್ಷ ತ್ಯಜಿಸಲು ನಿರ್ಧರಿಸಿದರೆ, ಈಗಾಗಲೇ ಕಾಂಗ್ರೆಸ್‌ ತ್ಯಜಿಸಿರುವ ಗುಲಾಂ ನಬಿ ಆಜಾದ್‌, ಜ್ಯೋತಿರಾದಿತ್ಯ ಸಿಂಧಿಯಾ, ಕಪಿಲ್‌ ಸಿಬಲ್‌, ಜಿತೇಂದ್ರ ಪ್ರಸಾದ, ಆರ್‌ಪಿಎನ್‌ ಸಿಂಗ್‌, ಸುನಿಲ್‌ ಜಾಖಡ್‌, ಅಶ್ವನಿ ಕುಮಾರ್‌, ಹಾರ್ದಿಕ್‌ ಪಟೇಲ್‌ ಮತ್ತು ಅಲ್ಪೆಶ್‌ ಠಾಕೋರ್‌ ಅವರ ಪಟ್ಟಿಯನ್ನು ಸೇರಲಿದ್ದಾರೆ.

              ಪ್ರಶಾಂತ್‌ ಕಿಶೋರ್‌ ನೆರವು: ಪೈಲಟ್‌ ಅವರ ಹೊಸ ಪಕ್ಷ ರಚನೆಗೆ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ ನೆರವಾಗುತ್ತಿದ್ದಾರೆ. ಅಲ್ಲದೆ ರಾಜಸ್ಥಾನದಲ್ಲಿ ಹನುಮಾನ್‌ ಬೇನಿವಾಲ್‌ ಅವರ ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷ (ಆರ್‌ಎಲ್‌ಪಿ) ಮತ್ತು ಎಎಪಿ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ. ಪೈಲಟ್‌ ಅವರು ಕಾಂಗ್ರೆಸ್‌ನಿಂದ ಹೊರನಡೆದರೆ ಅವರೊಂದಿಗೆ ಎಷ್ಟು ಶಾಸಕರು ಪಕ್ಷ ಬಿಡುತ್ತಾರೆ ಹಾಗೂ ಇದರಿಂದ ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. 45 ವರ್ಷದ ಪೈಲಟ್‌ ಅವರು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರೊಂದಿಗೆ ಕೆಲ ವರ್ಷಗಳಿಂದ ಭಿನ್ನಾಭಿಪ್ರಾಯ ಹೊಂದಿದ್ದಾರೆ. 2018ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದ ಗೆಹಲೋತ್‌ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕೆ ಹೈಕಮಾಂಡ್‌ ಇಲ್ಲಿಯವರೆಗೆ ಒಪ್ಪಿಗೆ ನೀಡಿಲ್ಲ. ಏಪ್ರಿಲ್‌ 11ರಂದು ಒಂದು ದಿನದ ಉಪವಾಸ ಮೇ 11ರಂದು ಐದು ದಿನಗಳ ಪಾದಯಾತ್ರೆಯನ್ನು ಪೈಲಟ್‌ ನಡೆಸಿದ್ದರು. ಇದೀಗ ಜೂನ್‌ 11ರಂದು ಅವರ ತಂದೆಯ ಪುಣ್ಯ ತಿಥಿಯಂದು ಏನು ಮಾಡುತ್ತಾರೆ ಎಂಬ ಪ್ರಶ್ನೆಗಳು ಎದುರಾಗಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries