ನವದೆಹಲಿ: ನಾವೊಂದು ಬಯಸಿದರೆ, ದೇವರು ಇನ್ನೊಂದು ಬಯಸುತ್ತಾನೆ ಎಂದು ಹಿರಿಯರು ಹೇಳ್ತಾರೆ. ನಾವು ಏನಾಗಬಾರದು ಎಂದು ಬಯಸುತ್ತೇವೋ ಅದೇ ಕೆಲವೊಂದು ಬಾರಿ ನಡೆದು ಬಿಡುತ್ತದೆ. ಗುಜರಾತ್ನಲ್ಲೂ ಇಂತಹದೇ ಒಂದು ಘಟನೆ ನಡೆದಿದೆ.
ಅವರು ಹಿರಿಯ ವಕೀಲರು.
ಆಗಿದ್ದೇನು?
ವಕೀಲರು ಅಹಮದಾಬಾದ್ ಹೈಕೋರ್ಟ್‌ನಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ 16 ವರ್ಷಗಳ ವೃತ್ತಿಜೀವನದಲ್ಲಿ ಅನೇಕ ಪ್ರಕರಣಗಳನ್ನು ವಾದಿಸಿದರು. ಈ ಅವಧಿಯಲ್ಲಿ ಅವರ ಬಳಿ ಬಂದ 138 ಜೋಡಿಗಳು ವಿಚ್ಛೇದನ ಪಡೆಯದಂತೆ ತಡೆದಿದ್ದಾರೆ. ಈಗ ಆ ಎಲ್ಲಾ ಜೋಡಿಗಳು ನೆಮ್ಮದಿಯಿಂದ ಬದುಕುತ್ತಿದ್ದಾರೆ.
ಆದರೆ ವಿಚಿತ್ರವೆಂದರೆ ವಕೀಲರ ಪತ್ನಿ ಅವರಿಗೆ ವಿಚ್ಛೇದನ ನೀಡಿದ್ದಾರೆ. ತನ್ನ ಬಳಿ ಬಂದವರನ್ನು ವಿಚ್ಛೇದನಕ್ಕೆ ಬಿಡದ ಕಾರಣ ಪ್ರಕರಣಗಳು ಕಡಿಮೆಯಾದವು. ಬಂದವರಿಗೆ ಕೌನ್ಸೆಲಿಂಗ್ ನೀಡಿದರೂ ಯಾವುದೇ ಶುಲ್ಕ ವಸೂಲಿ ಮಾಡದ ಕಾರಣ ಆರ್ಥಿಕ ಸಂಕಷ್ಟ ಶುರುವಾಗಿದೆ. ಇದರಿಂದ ಕುಟುಂಬದಲ್ಲಿ ಜಗಳ ಶುರುವಾಗಿದೆ. ಕೊನೆಗೆ ಬೇಸತ್ತ ವಕೀಲರ ಪತ್ನಿ ಪತಿಯಿಂದ ವಿಚ್ಛೇದನ ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದರು.
ವಕೀಲರಿಗೊಬ್ಬಳು ಮಗಳು…
ವಕೀಲರಿಗೆ ಒಬ್ಬ ಮಗಳಿದ್ದಾಳೆ. ಜಗಳದ ಕಾರಣ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಹೀಗಾಗಿ ಮಗಳು ತನ್ನ ತಾಯಿಯೊಂದಿಗೆ ಇದ್ದಾಳೆ. ಆಕೆಯೂ ಕಾನೂನು ವಿದ್ಯಾರ್ಥಿನಿ. ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಆಕೆ ತನ್ನ ತಾಯಿಯೊಂದಿಗೆ ಇದ್ದಳು. ವಿಚ್ಛೇದನದ ನಂತರ ತಂದೆಯೊಂದಿಗೆ ಇರುವುದಾಗಿ ಹೇಳಿದ್ದಾಳೆ. ತನ್ನ ತಂದೆಯೇ ತನ್ನ ರೋಲ್ ಮಾಡೆಲ್ ಎಂದು ಹೇಳುತ್ತಾಳೆ. ಆಕೆಯ ಇಚ್ಛೆಯಂತೆ ನ್ಯಾಯಾಲಯವೂ ಆಕೆಗೆ ತಂದೆಯೊಂದಿಗೆ ಇರಲು ಅನುಮತಿ ನೀಡಿದೆ. ಆದರೆ ಈ ಪ್ರಕರಣದಲ್ಲಿ ವಿಚ್ಛೇದಿತ ಪತ್ನಿ ತನ್ನ ಪತಿಯಿಂದ ಯಾವುದೇ ಜೀವನಾಂಶವನ್ನು ತೆಗೆದುಕೊಂಡಿಲ್ಲ ಎಂಬುದು ಗಮನಾರ್ಹ.
ಇವರು ಶುಲ್ಕ ರಹಿತ ವಕೀಲರು!
ವಿಚ್ಛೇದನಕ್ಕಾಗಿ ತನ್ನ ಬಳಿಗೆ ಬರುವವರಿಗೆ ವಕೀಲರು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಇದಕ್ಕೊಂದು ವಿಚಿತ್ರ ಕಾರಣವಿದೆ. ಅವರ ಹತ್ತಿರದ ಸಂಬಂಧಿ ಈ ಹಿಂದೆ ವಿಚ್ಛೇದನ ಪಡೆದಿದ್ದರು. ಅಂದಿನಿಂದ ಯಾವುದೇ ದಂಪತಿಗಳು ತನ್ನ ಬಳಿ ಬಂದು ವಿಚ್ಛೇದನ ಕೇಳಿದರೂ ಒಂದು ರೂಪಾಯಿ ಕೂಡ ವಸೂಲಿ ಮಾಡದೆ ಕೌನ್ಸೆಲಿಂಗ್ ಮಾಡುತ್ತಿದ್ದರು.
ಇದಲ್ಲದೆ, ಪತಿ-ಪತ್ನಿ ಒಟ್ಟಿಗೆ ಇರುವಂತೆ ಉತ್ತೇಜಿಸಲು ವಿಚ್ಛೇದನದ ವಿರುದ್ಧದ ಅಭಿಯಾನವನ್ನು ಸಹ ಮಾಡಿದ್ದರು. ಈ 16 ವರ್ಷಗಳ ವೃತ್ತಿ ಜೀವನದಲ್ಲಿ 138 ಜೋಡಿಗಳ ಮನವೊಲಿಸಿ ವಿಚ್ಛೇದನ ಪಡೆಯದಂತೆ ತಡೆದಿದ್ದಾರೆ. ಆದರೆ ಪತ್ನಿಯನ್ನು ಒಪ್ಪಿಸಲು ಮಾತ್ರ ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.