ಇಂಫಾಲ್: ಮಣಿಪುರದ ಪೂರ್ವ ಇಂಫಾಲ್ ಜಿಲ್ಲೆಯ ಇಥಾಮ್ ಗ್ರಾಮದಲ್ಲಿ ಮಹಿಳೆಯರ ಗುಂಪು ಮತ್ತು ಭದ್ರತಾ ಪಡೆಯ ನಡುವಣ ಮುಖಾಮುಖಿ ಕೊನೆಗೊಂಡಿದೆ. ಮಹಿಳೆಯರ ಆಕ್ರೋಶಕ್ಕೆ ಭದ್ರತಾ ಪಡೆಯು ಮಣಿದಿದೆ. ಬಂಧಿಸಿದ್ದ 12 ಮಂದಿ ಮೈತೇಯಿ ಬಂಡುಕೋರರನ್ನು ಶನಿವಾರ ಬಿಡುಗಡೆಗೊಳಿಸಿದೆ.
ಹೊತ್ತಿ ಉರಿಯುತ್ತಿರುವ ಕಣಿವೆ ರಾಜ್ಯದಲ್ಲಿ ಮತ್ತಷ್ಟು ಹಿಂಸಾಚಾರಕ್ಕೆ ಎಡೆಮಾಡಿ ಕೊಡಬಾರದು ಎಂದು ನಿರ್ಧರಿಸಿದ ಕಾರ್ಯಾಚರಣೆಯ ಹೊಣೆ ಹೊತ್ತ ಕಮಾಂಡರ್ 'ಪ್ರಬುದ್ಧ ನಿರ್ಧಾರ' ಕೈಗೊಂಡಿದ್ದಾರೆ ಎಂದು ಸೇನೆಯು ಶ್ಲಾಘಿಸಿದೆ.
ನಡೆದಿದ್ದು ಏನು?: ಇಥಾಮ್ ಗ್ರಾಮವು ಆಂಡ್ರೊ ಪಟ್ಟಣಕ್ಕೆ ಆರು ಕಿ.ಮೀ ದೂರದಲ್ಲಿದೆ. ನಿಷೇಧಿತ ಕಂಗ್ಲೀ ಯಾವೋಲ್ ಕನ್ನಾ ಲೂಪ್ (ಕೆವೈಕೆಎಲ್) ಗುಂಪಿಗೆ ಸೇರಿದ ಬಂಡುಕೋರರು ಈ ಹಳ್ಳಿಯಲ್ಲಿ ಅಡಗಿರುವ ಕುರಿತು ಯೋಧರಿಗೆ ಖಚಿತ ಮಾಹಿತಿ ಲಭಿಸಿತ್ತು. ಹಾಗಾಗಿ, ಕಾರ್ಯಾಚರಣೆಗೆ ಅಲ್ಲಿಗೆ ತೆರಳಿದ್ದರು.
ಶಸ್ತ್ರಸಜ್ಜಿತ ಬಂಡುಕೋರರನ್ನು ಬಂಧಿಸಿ ಅಲ್ಲಿಂದ ಕರೆದೊಯ್ಯಲು ಮುಂದಾದರು. ಆ ವೇಳೆ 1,500ಕ್ಕೂ ಹೆಚ್ಚು ಮಹಿಳೆಯರು ಯೋಧರನ್ನು ಸುತ್ತುವರಿದು ಉಗ್ರರ ರಕ್ಷಣೆಗೆ ನಿಂತರು. ಬಂಡುಕೋರರು ಮತ್ತು ಶಸ್ತ್ರಾಸ್ತ್ರಗಳನ್ನು ಗ್ರಾಮದ ಮುಖಂಡರಿಗೆ ಒಪ್ಪಿಸಿ ಅಲ್ಲಿಂದ ತೆರಳುವಂತೆ ಪಟ್ಟು ಹಿಡಿದರು.
ಯೋಧರು ಮತ್ತು ಮಹಿಳೆಯರ ನಡುವೆ ಒಂದು ಗಂಟೆ ವಾಗ್ವಾದ ನಡೆಯಿತು. ಹಾಗಾಗಿ, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ತಲೆದೋರಿತ್ತು. ಇದರಿಂದ ಯೋಧರು ಇಕ್ಕಟ್ಟಿಗೆ ಸಿಲುಕಿದರು.
'ಕಾರ್ಯಾಚರಣೆಗೆ ಅಡ್ಡಿಪಡಿಸುವುದು ಕಾನೂನುಬಾಹಿರ ಎಂದು ಉದ್ರಿಕ್ತ ಗುಂಪಿಗೆ ಯೋಧರು ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ, ಇದಕ್ಕೆ ಅವರು ಒಪ್ಪಿಲ್ಲ. ಗುಂಪು ಚದುರಿಸಲು ಕಾರ್ಯಾಚರಣೆ ಕೈಗೊಂಡರೆ ಹೆಚ್ಚಿನ ಸಾವು-ನೋವು ಸಂಭವಿಸುವ ಅಪಾಯ ಅರಿತ ಕಮಾಂಡರ್, ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಅಲ್ಲಿಂದ ವಾಪಸ್ ಮರಳಿದ್ದಾರೆ ಎಂದು ಭಾನುವಾರ ಅಧಿಕಾರಿಗಳು ತಿಳಿಸಿದ್ದಾರೆ.
20 ಯೋಧರನ್ನು ಹತ್ಯೆಗೈದ ಸಂಚುಕೋರ ಇದ್ದ!:
'ಗ್ರಾಮದಲ್ಲಿ ಅಡಗಿದ್ದ ಬಂಡುಕೋರರಲ್ಲಿ ಸ್ವಯಂಘೋಷಿತ ಲೆಫ್ಟಿನೆಂಟ್ ಕರ್ನಲ್ಮೊ ಯಿರಾಂಗ್‌ಥೆಮ್ ತಾಂಬಾ ಅಲಿಯಾಸ್ ಉತ್ತಮ್ ಕೂಡ ಇದ್ದ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'2015ರಲ್ಲಿ 6ನೇ ಡೋಗ್ರಾ ರೆಜಿಮೆಂಟ್ ಮೇಲೆ ಬಂಡುಕೋರರು ಹೊಂಚು ಹಾಕಿ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 20 ಯೋಧರು ಹುತಾತ್ಮರಾಗಿದ್ದರು. ಉತ್ತಮ್ ಈ ದಾಳಿಯ ಸಂಚುಕೋರನಾಗಿದ್ದ. ಹಲವೆಡೆ ದಾಳಿ ನಡೆಸಿದ ಆರೋಪವು ಕೆವೈಕೆಎಲ್ ಗುಂಪಿನ ಮೇಲಿದೆ' ಎಂದು ತಿಳಿಸಿದ್ದಾರೆ.
ಅಮಿತ್ ಶಾ - ಬಿರೆನ್ ಸಿಂಗ್ ಚರ್ಚೆ
: ಮಣಿಪುರದ ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭಾನುವಾರ ಭೇಟಿ ಮಾಡಿ ಕಣಿವೆ ರಾಜ್ಯದಲ್ಲಿನ ಸದ್ಯದ ಸ್ಥಿತಿಗತಿ ಬಗ್ಗೆ ವಿವರಿಸಿದ್ದಾರೆ.
ಶನಿವಾರ ನಡೆದ ಸರ್ವಪಕ್ಷಗಳ ಸಭೆಯ ಬಳಿಕ ಶಾ ಅವರ ಕರೆಯ ಮೇರೆಗೆ ಬೆಳಿಗ್ಗೆ ಇಂಫಾಲ್‌ನಿಂದ ದೆಹಲಿಗೆ ಬಂದ ಬಿರೆನ್ ಸಿಂಗ್ ನೇರವಾಗಿ ಗೃಹ ಸಚಿವರ ನಿವಾಸಕ್ಕೆ ತೆರಳಿದರು. ಈ ಚರ್ಚೆಯಲ್ಲಿ ಬಿಜೆಪಿ ವಕ್ತಾರ ಸಂಬಿತ್ ಸ್ವರಾಜ್, ರಾಜ್ಯಸಭಾ ಸದಸ್ಯ ಮಹಾರಾಜ ಮಣಿಪುರ್, ಮಣಿಪುರ ವಿಧಾನಸಭೆಯ ಸ್ಪೀಕರ್ ಸತ್ಯಬ್ರತ ಸಿಂಗ್ ಹಾಜರಿದ್ದರು. 'ಅಮಿತ್ ಶಾ ಅವರ ಮೇಲ್ವಿಚಾರಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಕಳೆದ ಒಂದು ವಾರದಿಂದ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಸಫಲವಾಗಿದ್ದು, ಇದೊಂದು ದೊಡ್ಡ ಹೆಜ್ಜೆಯಾಗಿದೆ' ಎಂದು ಬಿರೆನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
'ಜೂನ್ 13ರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ. ಶಾಂತಿ ಪುನರ್ ಸ್ಥಾಪನೆಗೆ ಸಂಬಂಧಿಸಿದಂತೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಅಮಿತ್ ಶಾ ಭರವಸೆ ನೀಡಿದ್ದಾರೆ' ಎಂದು ತಿಳಿಸಿದ್ದಾರೆ.
'ಶಾಶ್ವತ ಶಾಂತಿ ನೆಲೆಸಲು ಅಗತ್ಯವಿರುವ ಕ್ರಮಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಇನ್ನೂ ಹೆಚ್ಚಿನ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಈ ದಿಸೆಯಲ್ಲಿ ಎಲ್ಲರೂ ಸಹಕಾರ ನೀಡಬೇಕು' ಎಂದು ಕೋರಿದ್ದಾರೆ.