ನವದೆಹಲಿ: ಮುಂದಿನ ವಿಪಕ್ಷಗಳ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಹಿಂದೆ ಶಿಮ್ಸಾದಲ್ಲಿ ಸಭೆ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಜುಲೈ 13 ರಿಂದ ಎರಡು ದಿನ ಮುಂದಿನ ಸಭೆ ಜರುಗಲಿದೆ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ತಿಳಿಸಿದ್ದಾರೆ. ಇದು ವಿರೋಧ ಪಕ್ಷಗಳ ಎರಡನೇ ಸಭೆಯಾಗಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಬಿಜೆಪಿ ಸೋಲಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಕಳೆದ ವಾರ ಪಾಟ್ನಾದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಯೋಜಿಸಿದ್ದ ಸಭೆಯಲ್ಲಿ 17 ವಿರೋಧ ಪಕ್ಷಗಳು ಪಾಲ್ಗೊಂಡಿದ್ದವು. ಅಲ್ಲದೇ ಸಭೆ ನಂತರ ಮಾತನಾಡಿದ್ದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಂದಿನ ಸಭೆಯನ್ನು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಆಯೋಜಿಸಲಾಗುವುದು ಎಂದು ಹೇಳಿದ್ದರು.
ಆದರೆ, ಇದೀಗ ಸಭೆ ಆಯೋಜನೆಯ ಸ್ಥಳ ಬದಲಾಗಿದ್ದು, ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಎನ್ ಸಿಪಿ ಹಿರಿಯ ನಾಯಕ ಶರದ್ ಪವಾರ್ ತಿಳಿಸಿದ್ದಾರೆ.