ಇಂಫಾಲ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮನವಿ ಬೆನ್ನಲ್ಲೇ ಮಣಿಪುರದ ವಿವಿಧೆಡೆ 140ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಡಳಿತಕ್ಕೆ ಒಪ್ಪಿಸಲಾಗಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.
ಇಂಫಾಲ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮನವಿ ಬೆನ್ನಲ್ಲೇ ಮಣಿಪುರದ ವಿವಿಧೆಡೆ 140ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಡಳಿತಕ್ಕೆ ಒಪ್ಪಿಸಲಾಗಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.
ಈ ರೀತಿ ಒಪ್ಪಿಸಿದ ಶಸ್ತ್ರಾಸ್ತ್ರಗಳ ಪೈಕಿ ಬಂದೂಕುಗಳು, ಎಂ16 ಬಂದೂಕುಗಳು, ಅಶ್ರುವಾಯು ಮುಂತಾದವುಗಳಿವೆ.
ತಮ್ಮಲ್ಲಿರುವ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆ ಮತ್ತು ಆಡಳಿತಕ್ಕೆ ಒಪ್ಪಿಸುವಂತೆ ಅಮಿತ್ ಶಾ ಅವರು ಗುರುವಾರ ಮನವಿ ಮಾಡಿದ್ದರು. ಜೊತೆಗೆ 'ಶೀಘ್ರವೇ ರಾಜ್ಯದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸುತ್ತೇವೆ. ಆಗ ಶಸ್ತ್ರಾಸ್ತ್ರಗಳು ಕಂಡುಬಂದರೆ ಪ್ರಕರಣ ದಾಖಲಿಸುತ್ತೇವೆ' ಎಂದು ಎಚ್ಚರಿಸಿದ್ದರು.
ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಈವರಗೆ ಕನಿಷ್ಠ 80 ಮಂದಿ ಮೃತಪಟ್ಟಿದ್ದಾರೆ.
ರಾಷ್ಟ್ರಪತಿ ಭೇಟಿ ಮಾಡಿದ ಶಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.
ಸಂಘರ್ಷಪೀಡಿತ ಮಣಿಪುರಕ್ಕೆ ನಾಲ್ಕು ದಿನಗಳ ಕಾಲ ಭೇಟಿ ನೀಡಿ ಹಿಂದಿರುಗಿದ ಬಳಿಕ ಅವರು ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
'ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಇಂದು ಸೌಹಾರ್ದಯುತ ಸಭೆ ನಡೆಯಿತು' ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.