ನವದೆಹಲಿ: ಸಹಾಯಕ ಸಂತಾನೋತ್ಪತ್ತಿ ತಂತ್ರ (ಎಆರ್‌ಟಿ) ಪ್ರಕ್ರಿಯೆಯಲ್ಲಿ ವೀರ್ಯ ಅದಲು-ಬಲದು ಮಾಡಿದಕ್ಕೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ದೆಹಲಿಯ ಖಾಸಗಿ ಆಸ್ಪತ್ರೆ ಮತ್ತು ವೈದ್ಯರಿಗೆ 1.50 ಕೋಟಿ ರೂಪಾಯಿ ದಂಡ ವಿಧಿಸಿದೆ.
ಮಹಿಳೆಯೊಬ್ಬರು ಜೂನ್ 2009ರಲ್ಲಿ ಎಆರ್‌ಟಿ ಪಕ್ರಿಯೆಯ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಶಿಶುಗಳ ರಕ್ತದ ಗುಂಪು ಪಾಲಕರ ಗುಂಪಿನೊಂದಿಗೆ ಹೊಂದಾಣಿಕೆಯಾಗಿರಲಿಲ್ಲ. ಹೀಗಾಗಿ, ಪಿತೃತ್ವ ಪರೀಕ್ಷೆ ಅಥವಾ ಡಿಎನ್‌ಎ ಪ್ರೊಫೈಲ್ ಪರೀಕ್ಷೆಯನ್ನು ನಡೆಸಲಾಯಿತು. ಆಗ, ಮಹಿಳೆಯ ಪತಿಯು ಈ ಅವಳಿ ಮಕ್ಕಳ ಜೈವಿಕ ತಂದೆ ಅಲ್ಲ ಎಂಬುದು ಬಹಿರಂಗವಾಯಿತು. ಈ ಹಿನ್ನೆಲೆಯಲ್ಲಿ ದಂಪತಿಯು ಸೇವೆಯಲ್ಲಿನ ನಿರ್ಲಕ್ಷ್ಯಕ್ಕಾಗಿ 2 ಕೋಟಿ ರೂ. ಪರಿಹಾರ ನೀಡಬೇಕೆಂದು ಖಾಸಗಿ ಆಸ್ಪತ್ರೆ ವಿರುದ್ಧ ದೂರು ಸಲ್ಲಿಸಿದ್ದರು.
ಈ ದೂರನ್ನು ಆಲಿಸಿದ ಆಯೋಗ ಇತ್ತೀಚಿನ ವರ್ಷಗಳಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಮತ್ತು ಅನೈತಿಕ ಅಭ್ಯಾಸಗಳನ್ನು ಅನುಸರಿಸುತ್ತಿರುವ ಎಆರ್‌ಟಿ ಚಿಕಿತ್ಸಾಲಯಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ನವಜಾತ ಶಿಶುಗಳ ಡಿಎನ್‌ಎ ವಿವರ ನೀಡುವುದನ್ನು ಕಡ್ಡಾಯಗೊಳಿಸುವುದರ ಜತೆಗೆ, ಇಂತಹ ಚಿಕಿತ್ಸಾಲಯಗಳ ಮಾನ್ಯತೆ ನೀಡುವ ಅವಶ್ಯಕತೆಯಿದೆ ಎಂದು ಹೇಳಿದೆ.