ಕಾಸರಗೋಡು: 'ಕರಾವಳಿ ನಿರ್ವಹಣಾ ಕಾಯ್ದೆ-2019' ರ ಅಧಿಸೂಚನೆಯ ಪ್ರಕಾರ ಯೋಜನೆಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿನಿಧಿಗಳು ಮತ್ತು ಸಾರ್ವಜನಿಕರನ್ನೊಳಗೊಂಡ ಸಾರ್ವಜನಿಕ ವಿಚಾರಣಾ ಸಭೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.
ರಾಜ್ಯ ಕರಾವಳಿ ನಿರ್ವಹಣಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಪಮಿತ್ ನೇತೃತ್ವದಲ್ಲಿ ಆಯೋಜಿಸಿದ್ದ ಸಾರ್ವಜನಿಕ ವಿಚಾರಣೆಯನ್ನು ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್ ಉದ್ಘಾಟಿಸಿದರು. ಶಾಸಕರಾದ ಎಂ.ರಾಜಗೋಪಾಲನ್, ಎನ್.ಎ.ನೆಲ್ಲಿಕುನ್ ಎ.ಕೆ.ಎಂ.ಅಶ್ರಫ್, ಕರಾವಳಿ ನಿರ್ವಹಣಾ ಕಾಯ್ದೆಯ ವಿವಿಧ ಕ್ಯಾಟಗರಿಗಳಲ್ಲಿ ಒಳಪಡುವ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರು, ವಾರ್ಡ್‍ಸದಸ್ಯರು ಹಾಗೂ ಸಾರ್ವಜನಿಕರು ಜಿಲ್ಲೆಯ ಕರಾವಳಿ ವಲಯದ ತಮ್ಮ ಸಮಸ್ಯೆಗಳನ್ನು ಪ್ರಾಧಿಕಾರದ ಮುಂದೆ ಮಂಡಿಸಿದರು. ಕರಾವಳಿ ನಿರ್ವಹಣಾ ಪ್ರಾಧಿಕಾರದ ಮುಂದೆ 151 ಮತ್ತು ಆನ್‍ಲೈನ್ ಮೂಲಕ 16ದೂರುಗಳು ಸೇರಿದಂತೆ ಒಟ್ಟು 167 ದೂರುಗಳು ಲಭ್ಯವಗಿತ್ತು.
ಸಾರ್ವಜನಿಕ ವಿಚಾರಣೆಯ ಅಧ್ಯಕ್ಷತೆಯನ್ನು ಕರಾವಳಿ ನಿರ್ವಹಣಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಪಮಿತಿ, ತಜ್ಞ ಸದಸ್ಯರಾದ ಡಾ.ರವಿಚಂದ್ರನ್, ಡಾ.ರಿಚರ್ಡ್ ಸ್ಕಾರಿಯಾ, ಸತ್ಯನ್ ಮೇಪಯ್ಯೂರಿ, ಪರಿಸರ ಅಭಿಯಂತರರಾದ ಕಲೈಶರಾಣಿ, ಅಮೃತಾ ಸತೀಶನ್, ಕಾಸರಗೋಡು ನಗರ ಯೋಜನಾಧಿಕಾರಿ ಲೀ ಲಿಟ್ಟಿ ನೇತೃತ್ವ ವಹಿಸಿದ್ದರು. ರಾಷ್ಟ್ರೀಯ ಭೂ ವಿಜ್ಞಾನ ಕೇಂದ್ರದ ಡಾ. ರೆಜಿ ಯೋಜನೆ ವರದಿ ಮಂಡಿಸಿದರು. ಕೇರಳ ಕರಾವಳಿ ನಿರ್ವಹಣಾ ಪ್ರಾಧಿಕಾರದ ಜಂಟಿ ಕಾರ್ಯದರ್ಶಿ ಪಿ.ಸಿ.ಸಾಬು ಸ್ವಾಗತಿಸಿದರು.
ತುರ್ತ ಕ್ರಮಕ್ಕೆ ಆಗ್ರಹ:
ತ್ರಿಕರಿಪುರ ಮಂಡಲದ ವಲಿಯಪರಂಬ, ಪಡನ್ನ ಗ್ರಾಮ ಪಂಚಾಯಿತಿಗಳು ಮತ್ತು ನೀಲೇಶ್ವರಂ ನಗರಸಭೆಯ ಐತ್ತಲ ಪ್ರದೇಶಗಳು ಕರಾವಳಿ ನಿರ್ವಹಣಾ ಕಾಯ್ದೆಯಿಂದ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದು, ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಶಾಸಕ ಎಂ.ರಾಜಗೋಪಾಲನ್ ತಿಳಿಸಿದ್ದಾರೆ. ವಲಿಯಪರಂಬ ಗ್ರಾಮ ಪಂಚಾಯಿತಿ ಭೌಗೋಳಿಕ ಲಕ್ಷಣಗಳಿಂದಾಗಿ ಅಭಿವೃದ್ಧಿ ಕಾಮಗಾರಿಗಳು ನಡೆಯಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಅನೇಕ ಭೂಪ್ರದೇಶಗಳು ಸಮುದ್ರ ಮತ್ತು ನೀರಿನ ನಡುವೆ ಕೇವಲ 50 ಮೀಟರ್‍ಗಿಂತ ಕಡಿಮೆಯಿರುತ್ತವೆ. ಕರಾವಳಿ ನಿರ್ವಹಣಾ ಕಾಯ್ದೆಯನ್ವಯ ಇಲ್ಲಿ ನಿರ್ಮಾಣಕಾರ್ಯಗಳಿಗೆ ತೊಡಕುಂಟಾಗುತ್ತಿದೆ. ಕರಾವಳಿ ಜನಸಂಖ್ಯೆಯನ್ನು ರಕ್ಷಿಸಲು ಕಾನೂನಿನಲ್ಲಿ ಸಮಯೋಚಿತ ಬದಲಾವಣೆಗಳೊಂದಿಗೆ ಹೆಚ್ಚಿನ ಪ್ರವಾಸಿ ಪ್ರಾಮುಖ್ಯತೆಯ ಪ್ರದೇಶದಲ್ಲಿ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.