ತಿರುವನಂತಪುರಂ: ಕೇರಳದಲ್ಲಿ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿದಿನ ರೋಗಿಗಳು 13,000 ದಾಟಿದ್ದಾರೆ ಎಂದು ವರದಿಯಾಗಿದೆ.
ಬುಧವಾರವೊಂದೇ ದಿನ 13,258 ಮಂದಿಗೆ ಜ್ವರ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಲಪ್ಪುರಂ ಒಂದರಲ್ಲೇ 2,203 ಮಂದಿಗೆ ಜ್ವರ ಪ್ರಕರಣಗಳು ದಾಖಲಾಗಿವೆ. 43 ಮಂದಿಗೆ ಡೆಂಗ್ಯೂ ಜ್ವರ ಹಾಗೂ 15 ಮಂದಿಗೆ ಇಲಿ ಜ್ವರ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 315 ಮಂದಿಗೆ ಡೆಂಗ್ಯೂ ಲಕ್ಷಣಗಳು ಕಾಣಿಸಿಕೊಂಡಿವೆ.
ಜ್ವರದಿಂದ ಮೃತಪಟ್ಟ ಇಬ್ಬರಿಗೆ ಇಲಿ ಜ್ವರ ತಗುಲಿರುವ ಶಂಕೆ ವ್ಯಕ್ತವಾಗಿದೆ. ಮೂವರ ಸಾವಿಗೆ ಡೆಂಗ್ಯೂ ಜ್ವರ ಕಾರಣ ಎಂದು ಶಂಕಿಸಲಾಗಿದೆ. ರಾಜ್ಯದಲ್ಲಿ ನಿನ್ನೆ 6 ಮಂದಿ ಜ್ವರದಿಂದ ಸಾವನ್ನಪ್ಪಿದ್ದಾರೆ. ಕೊಲ್ಲಂ ಒಂದರಲ್ಲೇ ನಾಲ್ಕು ಸಾವುಗಳು ವರದಿಯಾಗಿವೆ. ಎರ್ನಾಕುಳಂನಲ್ಲಿ ವಿದ್ಯಾರ್ಥಿಯೊಬ್ಬ ಜ್ವರದಿಂದ ಸಾವನ್ನಪ್ಪಿದ್ದಾನೆ. ಸಮದ್ (18) ಮುವಾಟ್ಟುಪುಳದ ಪೆಜೈಕಪಿಲ್ಲಿ ಕುನ್ನುಂಪುರ ಎಂಬಲ್ಲಿನ ತನ್ನ ಮನೆಯಲ್ಲಿ ಮೃತಪಟ್ಟಿದ್ದಾನೆ. ಎರಡು ದಿನಗಳ ಹಿಂದೆ ವಿದ್ಯಾರ್ಥಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ.